ಹುಳಿಯಾರು
ಬೆಲೆ ಏರಿಕೆ ನಡುವೆಯೂ ಪಟ್ಟಣದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆದಿದ್ದು ಹಬ್ಬದ ಗೌಜು, ಗದ್ದಲದ ಮಧ್ಯೆ ಗುರುವಾರ ಮತ್ತು ಶುಕ್ರವಾರ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ಸಾಗಿತ್ತು.
ಪಟ್ಟಣದ ಗಾಂಧಿಪೇಟೆ, ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಸಂತೆ ಸೇರಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನರೇ ಕಾಣಿಸುತ್ತಿದ್ದರು. ಸಂತೆಯಲ್ಲಿನ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳ ಬಳಿ ಹೆಚ್ಚು ಜನ ಜಮಾಯಿಸಿದ್ದರಲ್ಲದೆ, ತರಕಾರಿ ಅಂಗಡಿ, ಹಣ್ಣು, ಹೂ ಅಂಗಡಿಗಳಲ್ಲೂ ಸಹ ಮಾರಾಟ ಜೋರಾಗಿತ್ತು.
ಯುಗಾದಿ ಹಬ್ಬದಂದು ಹೊಸಬಟ್ಟೆ ತೊಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿದ್ದು ಕಡೇಪಕ್ಷ ಹಬ್ಬದ ದಿನ ಉಡುದಾರವನ್ನಾದರೂ ತೊಡಬೇಕೆನ್ನುವ ಆಚರಣಿಯಿಂದಾಗಿ ಉಡುದಾರ ಮಾರುವವರಿಗೂ ಬೇಡಿಕೆ ಹೆಚ್ಚಾಗಿತ್ತು. ಸಂತೆ ಸೇರಿದಂತೆ ಪಟ್ಟಣದ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಯುಗಾದಿ ಉಡುದಾರ ಎಂದು ಕೂಗುತ್ತಾ ವ್ಯಾಪಾರ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಯುಗಾದಿಗೆ ಹೊಸಬಟ್ಟೆ ತರುವ ಪರಿಪಾಠವಿರುವುದರಿಂದ ಬಟ್ಟೆ ಅಂಗಡಿಗಳಲ್ಲಿ ಜನ ಜಂಗುಳಿ ಕಂಡುಬಂತು. ರಸ್ತೆಗಳಲ್ಲಿಯೇ ರಾಶಿ ರಾಶಿ ಬಟ್ಟೆಗಳ ಖರೀದಿ ಸಹ ಭರ್ಜರಿಯಾಗಿ ನಡೆಯುತ್ತಿತ್ತು. ರಂಗನಾಥಸ್ವಾಮಿ ದೇವಾಲಯ ರಸ್ತೆ, ಬಸ್ ನಿಲ್ದಾಣದಲ್ಲಿ, ಆಸ್ಪತ್ರೆ ರಸ್ತೆಯಲ್ಲಿ ಭರ್ಜರಿ ಬಟ್ಟೆ ವ್ಯಾಪಾರ ನಡೆಯುತ್ತಿದ್ದು ಬಟ್ಟೆ ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು.
ಯುಗಾದಿಯೆಂದರೆ ಒಬ್ಬಟ್ಟಿನ ಹಬ್ಬವಾಗಿದ್ದು ಬೆಲ್ಲ, ಬೇಳೆಗಳ ಖರೀದಿಗೆ ದಿನಸಿ ಅಂಗಡಿಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದರು. ಹೂವಿನ ವ್ಯಾಪಾರ ಜೋರಾಗಿದ್ದು ಮಾರು ಹೂವಿಗೆ 80 ರಿಂದ 100 ರೂ ಬೆಲೆಯಿತ್ತು. ಕಂಡ ಕಂಡ ಸ್ಥಳಗಳಲ್ಲಿ ಪುಟ್ಟಿಗಳಲ್ಲಿ ಮಹಿಳೆಯರು ಸಾಲು ಸಾಲಾಗಿ ಪುಟ್ಟಿಗಳಲ್ಲಿ ನಾನಾ ಬಗೆಯ ಹೂವುಗಳನ್ನು ಇಟ್ಟುಕೊಂಡು ಸುಡು ಬಿಸಿಲಿನಲ್ಲಿ ಮಾರಾಟಕ್ಕೆ ಕುಳಿತಿದ್ದರು. ರಸ್ತೆಯಲ್ಲೇ ಹಬ್ಬದ ವ್ಯಾಪಾರ ನಡೆಯುತ್ತಿದ್ದರಿಂದ ರಸ್ತೆಯ ಎರಡು ಬದಿಗಳಲ್ಲಿ ದ್ವಿಚಕ್ರ ವಾಹನಗಳು ಅಡ್ಡಾದಿಡ್ಡಿಯಾಗಿ ನಿಂತಿದ್ದರಿಂದ ಓಡಾಡಲು ಜನತೆ ಪರದಾಟ ನಡುಸುತ್ತಿದ್ದುದು ಸಾಮಾನ್ಯವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
