ಹಾವೇರಿ
ಲೋಕಸಭಾ ಚುನಾವಣೆ ಮತದಾನ ಜಾಗೃತಿಯ ಹಾವೇರಿ ಜಿಲ್ಲಾ ರಾಯಭಾರಿ ಕುರಿಗಾಯಿ ಗಾಯಕ ಹನುಮಂತಪ್ಪ ಚಿಲ್ಲೂರಬಡ್ನಿ ಅವರು ಸೈಕಲ್ ಸವಾರಿ ನಡೆಸಿ ನಗರದಾದ್ಯಂತ ಮತದಾನ ಜಾಗೃತಿ ಮೂಡಿಸಿದರು.
ಜಾನಪದ ಕಂಠದಿಂದ ನಾಡಿನ ಮನೆಮಾತಾಗಿರುವ ಹಾವೇರಿ ಜಿಲ್ಲೆಯ ಚಿಲ್ಲೂರಬಡ್ನಿ ತಾಂಡಾದ ಹನುಂತಪ್ಪ ಜಿಲ್ಲಾ ಕೇಂದ್ರದಲ್ಲಿ ಮೊದಲ ಬಾರಿಗೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವೀಪ್ ಐಕಾನ್ ಹನುಮಂತು ಜಿಲ್ಲಾ ಕ್ರೀಡಾಂಗಣದಿಂದ ಜೆ.ಎಚ್,ಪಟೇಲ್ ವೃತ್ತ, ವಿ.ಕೃ ಗೋಕಾಕ ವೃತ್ತ ಎಂ.ಜಿ. ರಸ್ತೆ ಮಾರ್ಗವಾಗಿ ಪಿ.ಬಿ.ರಸ್ತೆಯ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ವಿದ್ಯಾರ್ಥಿಗಳೊಂದಿಗೆ ಸೈಕಲ್ ತುಳಿದು ಮತದಾನ ಜಾಗೃತಿಗೆ ಸ್ಪೂರ್ತಿ ತುಂಬಿದರು.
ಹೊಸಮನಿ ಸಿದ್ದಪ್ಪ ವೃತ್ತದ (ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ) ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗಾಯಕ ಹನುಮಂತಪ್ಪ ಇದೇ ಎಪ್ರಿಲ್ 23 ರಂದು ಹಾವೇರಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನೀವೆಲ್ಲರೂ ತಪ್ಪದೇ ಮಾತದಾನ ಮಾಡಿ ಎಂದು ಕರೆ ನೀಡಿದರು.
ನನಗೆ ಮೊದಲಬಾರಿಗೆ ಮತದಾನ ಮಾಡುವ ಹಕ್ಕು ದೊರೆತಿದೆ. ನಾನು ಮತದಾನ ಮಾಡುವೆ ನೀವು ಸಹ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಶ್ರೀಮತಿ ಕೆ.ಲೀಲಾವತಿ ಅವರು ಮಾತನಾಡಿ, ಪ್ರಜಾಪ್ರಭುತ್ವದ ಗೆಲುವಿಗಾಗಿ ಹೆಚ್ಚು ಮತದಾನವಾಗಬೇಕು. ಮತದಾನ ಹೆಚ್ಚಳಕ್ಕಾಗಿ ಗ್ರಾಮಗಳಿಂದ ಜಿಲ್ಲಾ ಹಂತದವರೆಗೂ ನಿತ್ಯವೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವಿಎಂಗಳ ಬಳಕೆ ವಿವಿಪ್ಯಾಟ್ಗಳ ಅರಿವು ಕುರಿತು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಜಾಥಾ, ರ್ಯಾಲಿ, ಮತದಾನ ಪ್ರತಿಜ್ಞಾವಿಧಿ ಬೋಧನೆ ಸೇರಿದಂತೆ ಹಲವಾರು ಚಟುವಟಿಕೆಗಳ ಮೂಲಕ ಮತದಾರರ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯವರೇ ಆದ ಗಾಯಕ ಹನುಮಂತಪ್ಪ ಅವರನ್ನು ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈಗಾಗಲೇ ಸವಣೂರ ಭಾಗದಲ್ಲಿ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ಮತದಾನ ಜಾಗೃತಿ ಚಟುವಟಿಕೆಯಲ್ಲಿ ಪಾಲ್ಗೊಂಡು ಅರಿವು ಮೂಡಿಸಿದ್ದಾರೆ. ಮೊದಲ ಬಾರಿಗೆ ಹಾವೇರಿ ನಗರಕ್ಕೆ ಆಗಮಿಸಿ ಸೈಕಲ್ ಜಾಥಾದ ಮೂಲಕ ಮತದಾರರ ಜಾಗೃತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದೇ 17 ರಂದು ನಡೆಯುವ ಮತಗೋಷ್ಠಿ ಹಾಗೂ 19 ರಂದು ನಡೆಯುವ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಹನುಮಂತಪ್ಪ ಅವರಿಂದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಷಾಕೀರ ಅಹ್ಮದ್, ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
