ಹಾನಗಲ್ಲ :
ನೀರು ಪೋಲಾಗುತ್ತಿದೆ, ಅಂತರ್ಜಲ ಬತ್ತಿದೆ, ಕುಡಿಯುವ ನೀರಿಗೆ ತಕಾರರು ಬಂದಿದೆ, ನಾಳಿನ ಬದುಕು ನೀರಿಗಾಗಿ ಏನಾದೀತು ಎಂದು ಪ್ರಶ್ನೆಸಿಕೊಳ್ಳುವ ನಾವು ನೀರು ಭೂಮಿಗೆ ಇಂಗಿಸಿ ನಾಳೆಗಾಗಿ ಉಳಿಸಿಕೊಳ್ಳುವ ಯತ್ನ ನಡೆಯಬೇಕಾಗಿದ್ದು ಇಂಥ ಪ್ರಯತ್ನದಲ್ಲಿ ಹಾನಗಲ್ಲ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಾಡಿನಲ್ಲಿ ಬಿದ್ದ ಮಳೆ ನೀರು ಹರಿದು ಝರಿ ನದಿ ಸೇರಿ ಹೋಗುತ್ತಿತ್ತು. ವಿರಳ ಮಳೆ ಕಾರಣದಿಂದ ಕಾಡಿನಲ್ಲಿ ತಂಪು ಉಳಿಯದ ಕಾರಣ ಕಾಡಿನ ಉತ್ಪನ್ನಗಳೂ ನಶಿಸುತ್ತಿವೆ. ಇಂಥ ಸಂದರ್ಭದಲ್ಲಿ ನೀರು ಉಳಿಸಿದರೆ ಕಾಡು ಉಳಿಯುತ್ತಿದೆ ಎಂಬ ಸತ್ಯವನ್ನು ಅರಿತ ಹಾನಗಲ್ಲ ವಲಯ ಅರಣ್ಯ ಇಲಾಖೆ ಸಾವಿರಾರು ಇಂಗು ಗುಂಡಿಗಳನ್ನು ತೆರೆಯುವ ಮೂಲಕ ನೀರು ಉಳಿಸಿ, ಕಾಡು ಬೆಳೆಸುವ ಯೋಜನೆಗೆ ಉತ್ತಮ ಚಾಲನೆ ನೀಡಿ ಯಶಸ್ವಿಯಾಗಿದ್ದಾರೆ.
ಈಗಾಗಲೇ 225 ರಷ್ಟು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಕಾರ್ಯಕ್ಕೆ ಸಫಲವಾಗಿಸಿಕೊಂಡಿದ್ದಾರೆ. ಐದು ಅಡಿ ಉದ್ದ, ಒಂದು ಅಡಿ ಅಗಲ, ಒಂದು ಅಡಿ ಆಳದ ಈ ಗುಂಡಿಗಳು ಮಳೆಯ ನೀರನ್ನು ಹಿಡಿದು ಕಾಡಿನಲ್ಲಿ ಇಂಗಿಸಲು ಯಶಸ್ವಿಯಾಗಿವೆ. ಈ ಯೋಜನೆ ಕಾಮಗಾರಿ ನಡೆಯುತ್ತಿರುವಂತೆಯೇ ಒಂದೆರಡು ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಇಂಗು ಗುಂಡಿಗಳು ನೀರಿನಿಂದ ತುಂಬಿ, ನೀರು ಇಂಗಿದ ಸಂಗತಿ ಅರಣ್ಯ ಇಲಾಖೆಯ ಕಾರ್ಯಕ್ಕೆ ಸಂತೃಪ್ತಿ ನೀಡಿದೆ.
ಇಳಿಜಾರು ಜಾಗೆಯಲ್ಲಿ ಇಂಥ ಇಂಗು ಗುಂಡಿ ನಿರ್ಮಿಸುತ್ತಿದ್ದು ಇದರ ಯಶಸ್ಸು ಕಣ್ಮುಂದೆ ಸಂತಸ ಮೂಡಿಸಿದೆ. ಈ ಯೋಜನೆಗೆ ಸರಕಾರ ಸಾಕಷ್ಟು ಹಣ ನೀಡಿದರೆ ನಾಡು ಕಾಡು ಕೂಡಿಯೇ ಉಳಿಯಬಲ್ಲದು. ಅರಣ್ಯವೂ ದಟ್ಟವಾಗಿ ಕಾಡು ಪ್ರಾಣಿಗಳೂ ಜೀವ ಭಯವಿಲ್ಲದೆ ಬದುಕಲು ಸಾಧ್ಯ ಎಂಬ ವಿಶ್ವಾವಿದೆ.