ದಾವಣಗೆರೆ
ದೇಶದಲ್ಲಿ ಶ್ರೀಮಂತ, ಬಡವ, ಮಧ್ಯಮ ವರ್ಗದವರಿದ್ದರೂ ಅವರೆಲ್ಲರಿಗೂ ಒಂದೇ ರೀತಿಯ ಮತ ಚಲಾಯಿಸುವ ಹಕ್ಕನ್ನು ಮಾತ್ರ ನೀಡಲಾಗಿದೆ. ಮತ ಚಲಾಯಿಸುವಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಲೋಕಸಭಾ ಸಾರ್ವತ್ರಿಕ ಚುನಾವಣೆ ದಾವಣಗೆರೆ ಕ್ಷೇತ್ರದ ಸಾಮಾನ್ಯ ವೀಕ್ಷಕ ಆನಂದ್ ಶರ್ಮಾ ತಿಳಿಸಿದರು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ, ಕುರ್ಕಿ ಗ್ರಾಮ ಪಂಚಾಯಿತಿ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯದ ಎಂಬಿಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಯುವ ಮತ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ಒಂದೇ ಒಂದು ಮತದಿಂದ ಸಾಕಷ್ಟು ಬದಲಾವಣೆಗಳಾಗಿವೆ. ಚುನಾವಣೆಯಲ್ಲಿ ಒಂದೊಂದು ಮತವೂ ಮುಖ್ಯವಾಗಿರುತ್ತವೆ. ಕರ್ನಾಟಕದಲ್ಲಿ 2004 ರ ಚುನಾವಣೆಯಲ್ಲಿ ಎ.ಆರ್. ಕೃಷ್ಣಮೂರ್ತಿಯವರು ಕೇವಲ ಒಂದು ಮತದ ಅಂತರದಿಂದ ಸೋಲನ್ನು ಕಂಡಿದ್ದರು ಎಂದು ಮತಗಳ ಮಹತ್ವ ಕುರಿತು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್. ಬಸವರಾಜೇಂದ್ರ ಮಾತನಾಡಿ, ಮತದಾನ ಪಕ್ರಿಯೆಯಲ್ಲಿ ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ. ಚುನಾವಣೆಯಲ್ಲಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಪ್ರಜ್ಞಾವಂತರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕು. ಅರ್ಹ ಎಲ್ಲಾ ವಿದ್ಯಾರ್ಥಿಗಳು ಮತದಾನದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು ಹಾಗೂ ತಮ್ಮ ನೆರೆ-ಹೊರೆಯವರಿಗೆ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ ಹಲಸೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಗೆ ಸಹಕರಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವಂತಹ ಶಕ್ತಿಯಿದೆ. ಆದ್ದರಿಂದ ಯಾವ ಯುವ ಮತದಾರರೂ ಮತದಾನದಿಂದ ಹೊರಗುಳಿಯದೇ ಕಡ್ಡಾಯವಾಗಿ ಮತ ಚಲಾಯಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.
ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕಣ್ಣನ್ ಮಾತನಾಡಿ, ನಮ್ಮ ಸಂವಿಧಾನದ ಪ್ರಕಾರ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನಕ್ಕೆ ಅರ್ಹರು. ಯುರೋಪ್ನಂತಹ ರಾಷ್ಟ್ರಗಳಲ್ಲಿ ಮತದಾನದ ಹಕ್ಕು ಪಡೆಯಲು ಕಷ್ಟ ಪಡಬೇಕಿದೆ. ಆದರೆ ಇಲ್ಲಿ ಮತದಾನದ ಹಕ್ಕು ಸಿಕ್ಕರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮತದಾನದ ಹಕ್ಕು ಪಡೆದ ಯಾವೊಬ್ಬ ಮತದಾರರು ಮತದಾನದಿಂದ ದೂರ ಉಳಿಯಬಾರದು ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಆಡಳಿತವಿದೆ. ಪ್ರಜಾಪ್ರಭುತ್ವದಲ್ಲಿ ಮತದಾನವು ಒಂದು ಅತ್ಯಂತ ಪ್ರಮುಖ ಕರ್ತವ್ಯವಾಗಿದೆ. ಪ್ರತಿಯೊಬ್ಬ ಪ್ರಜೆಯು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ಕುರ್ಕಿ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾರದಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮತದಾನ ಪ್ರತಿಜ್ಞಾವಿಧಿ ಭೋಧಿಸಿದರು
ಕಾರ್ಯಕ್ರಮದಲ್ಲಿ ಚುನಾವಣಾ ತಹಶೀಲ್ದಾರ್ ವಿಜಯ್ ಕುಮಾರ್, ದಾವಣಗೆರೆ ತಾಲೂಕು ಪಂಚಾಯತ್ ಇಓ ಎಮ್.ವಿ ಚಳಗೇರಿ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಎನ್.ಎಸ್. ಆನಂದ್ ದಾ.ವಿ.ವಿ.ಯ ಸ್ವೀಪ್ ಸಮಿತಿಯ ಸದಸ್ಯ ಪ್ರೊ. ಲಕ್ಷ್ಮಣ್, ದಾ.ವಿ.ವಿ.ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ತಾ.ಪಂ. ಸಿಬ್ಬಂದಿಗಳು ಹಾಗೂ ದಾವಿವಿಯ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








