ತುಮಕೂರು
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಉಪ ಸಮಿತಿಗಳ ವತಿಯಿಂದ ಜಿಲ್ಲಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಿರುವ ಫಲವಾಗಿ ಏಪ್ರಿಲ್ 18ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇಕಡಾ 4.61ರಷ್ಟು ಮತದಾನದ ಪ್ರಮಾಣ ಹೆಚ್ಚಳವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ಮತದಾನ ಕುರಿತು ಜಿಲ್ಲೆಯಾದ್ಯಂತ ಕರಪತ್ರ ಮತ್ತು ಭಿತ್ತಿಪತ್ರಗಳ ವಿತರಣೆ, ಹೋರ್ಡಿಂಗ್ಸ್‍ಗಳ ನಿರ್ಮಾಣ, ಉದ್ಯೋಗ ಮೇಳಕ್ಕೆ ಆಗಮಿಸಿದ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ನಗರ ಪ್ರದೇಶದ ಹೊಸ ಮತದಾರರಿಗೆ ಅರಿವು ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮತ್ತು ಹೊಸ ಮತದಾರರ ನೋಂದಣಿ ಕಾರ್ಯಕ್ಕೆ ಅಗತ್ಯ ಕ್ರಮವಹಿಸಲಾಗಿತ್ತು.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತರಿಪಡಿಸಿಕೊಳ್ಳಲು ಉಚಿತ ಸಹಾಯವಾಣಿ 1950ರ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮ ನೀಡಿ, ಕಾಲೇಜು ಕ್ಯಾಂಪಸ್ ಅಂಬಾಸಿಡಾರ್ ಮೂಲಕ ಪ್ರಚಾರ ಕೈಗೊಂಡಿದ್ದರಿಂದ ಜಿಲ್ಲೆಯಲ್ಲಿ ಸುಮಾರು 45000 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಚುನಾವಣೆ ಘೋಷಣೆಯಾದ ನಂತರ ಇ.ವಿ.ಎಂ. ಮತ್ತು ವಿವಿಪ್ಯಾಟ್ ಯಂತ್ರಗಳ ಬಗ್ಗೆ ಜಿಲ್ಲೆಯ ಎಲ್ಲಾ 2708 ಗ್ರಾಮಗಳಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಜಿಲ್ಲೆಯ ಎಲ್ಲಾ ಸಫಾಯಿ ಕರ್ಮಚಾರಿಗಳು, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯರುಗಳು, ನಗರದ ವಾಯುವಿಹಾರಿಗಳು, ಎ.ಬಿ.ವಿ.ಪಿ. ವಿದ್ಯಾರ್ಥಿಗಳ ಸಂಘಟನೆಗಳ ವಿದ್ಯಾರ್ಥಿಗಳಿಗೆ ಇ.ಎಲ್.ಸಿ. ಸಮಾಲೋಚಕರು ಮತ್ತು ಮಾಸ್ಟರ್ ಟ್ರೈನರ್‍ಗಳಿಗೆ, ಗಾರ್ಮೆಂಟ್ಸ್ ನೌಕರರಿಗೆ, ಕೈಗಾರಿಕಾ ಪ್ರದೇಶದ ನೌಕರರು, ಕಾರ್ಮಿಕ ವರ್ಗದವರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳುವಳಿಕೆ ನೀಡಲಾಗಿತ್ತು.
ಸಿ-ವಿಜಿಲ್ ಕುರಿತ ಪ್ರಚಾರಕ್ಕಾಗಿ ಆಟೋರಿಕ್ಷಾಗಳು ಹಾಗೂ ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಪೋಸ್ಟರ್ ಅಂಟಿಸುವ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಸಾಲುಮರದ ತಿಮ್ಮಕ್ಕ ಅವರನ್ನು ಆಯ್ಕೆಮಾಡಿಕೊಂಡು ಇವರ ಮೂಲಕ ಯುವಮತದಾರರು, ವಿಶೇಷ ಚೇತನರಿಗೆ ಮತದಾನದ ಮಹತ್ವ ಕುರಿತು ವೀಡಿಯೋ ಸಿ.ಡಿ. ಬಿಡುಗಡೆ ಮೂಲಕ ಪ್ರೇರೇಪಣೆ ನೀಡಲಾಗಿತ್ತು.
ಜಿಲ್ಲೆಯಲ್ಲಿನ ಹಿರಿಯ ನಾಗರಿಕರು, ವಯೋವೃದ್ಧರು, ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರಿಗೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನೌಕರರು, ಲಿಂಗತ್ವ ಅಲ್ಪಸಂಖ್ಯಾತರು, ವಿಶೇóಷ ಚೇತನರಿಗೆ ತರಬೇತಿ ನೀಡಿ ಮತದಾನ ಮಾಡಲು ಅವರುಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ (ವ್ಹೀಲ್‍ಚೇರ್, ರ್ಯಾಂಪ್ಸ್, ಬೂತಗನ್ನಡಿ, ವಾಹನ ಸೌಕರ್ಯ, ಸ್ವಯಂ ಸೇವಕರು) ಮಾಹಿತಿ ನೀಡಲಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಚೇತನರು ಮತಪಟ್ಟಿಗೆ ನೋಂದಣಿಯಾಗಿದ್ದು, ಸುಮಾರು 22000 ವಿಶೇಷ ಚೇತನರು ಮತ ಚಲಾಯಿಸಿರುತ್ತಾರೆ.
ಜಿಲ್ಲೆಯಲ್ಲಿ ರಂಗೋಲಿ, ಕ್ರಿಕೆಟ್, ವಾಲಿಬಾಲ್, ಕಬ್ಬಡಿ, ಕೋಕೋ, ಚಿತ್ರಕಲಾ ಸ್ಪರ್ಧೆ, ಮತ್ತಿತರ ಕ್ರೀಡಾ ಸ್ಪರ್ಧೆಗಳ (ಸ್ವೀಪ್ ಕಪ್ ಕ್ರಿಕೆಟ್ ಟೂರ್ನಮೆಂಟ್) ಮೂಲಕ ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ. ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಹಾಗೂ ಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ 186 ಬೀದಿ ನಾಟಕಗಳ ಪ್ರದರ್ಶನದ ಮೂಲಕ ಮತದಾನದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಜಿಲ್ಲೆಯಲ್ಲಿ 22 ಜನಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಸ್ವೀಪ್ ಸಮಿತಿಯ ಪರಿಶ್ರಮದಿಂದ ಒಟ್ಟಾರೆ ಜಿಲ್ಲೆಯ ಮತದಾನ ಪ್ರಮಾಣ ಕಳೆದ 2014ರ ಲೋಕಸಭಾ ಚುನಾವಣೆ(72.50%)ಗಿಂತ ಶೇಕಡಾ 4.61ರಷ್ಟು ಹೆಚ್ಚಿನ ಅಂದರೆ ಶೇ.77.11 ರಷ್ಟು ಮತದಾನವಾಗಿದ್ದು, ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದ್ದಾರೆ.