ಮಕ್ಕಳಲ್ಲಿನ ಪ್ರತಿಭೆ ಅರಳಿಸುವುದು ಉತ್ತಮ ಕಾರ್ಯ : ಡಾ.ಕೆ.ಬಸಪ್ಪ

ಬಳ್ಳಾರಿ

      ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ತೊಡಗುವಂತೆ ಮಾಡಬೇಕಾಗಿರುವುದು ಪೋಷಕರ ಕರ್ತವ್ಯವಾಗಿದೆ. ಪ್ರಸ್ತುತ ಮಕ್ಕಳು ಟಿ.ವಿ, ಮೊಬೈಲ್‍ಗೆ ಮೊರೆಹೋಗುತ್ತಿದ್ದಾರೆ. ಅದನ್ನು ತಪ್ಪಿಸಿ ಜೀವಂತ ಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆಯಂತಹ ಚಟುವಟಿಕೆಗಳನ್ನು ಕಲಿಸುತ್ತಿರುವುದು ಉತ್ತಮ ಕಾರ್ಯ ಎಂದು ಸರಳಾದೇವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಕೆ.ಬಸಪ್ಪ ತಿಳಿಸಿದರು.

     ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯಲು ಸ್ಮಾರಕ ರಾಮಕೃಷ್ಣ ವಿಲಾಸ ವೇದಿಕೆಯಲ್ಲಿ ಸಂಜೀವರಾಯನ ಕೋಟೆಯ ರಂಗಕಹಳೆ ಸಾಂಸ್ಕತಿಕ ಸಂಘವು ಹಮ್ಮಿಕೊಂಡಿದ್ದ ಮಕ್ಕಳ ಸಾಂಸ್ಕತಿಕ ಕಾರ್ಯಕ್ರಮ(ತರಬೇತಿ)ದ ಸಮಾರೋಪ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

     ರಂಗಕಹಳೆ ಸಾಂಸ್ಕತಿಕ ಸಂಘವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅರಳಿಸಲು ಸಾಂಸ್ಕತಿಕ ಚಟುವಟಿಕೆಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಹೇಳಿದರು.

     ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಶಾಲಾ ರಜಾ ದಿನಗಳಲ್ಲಿ ಅವಿಭಕ್ತ ಕುಟುಂಬದಲ್ಲಿ ಅಜ್ಜ, ಅಜ್ಜಿ, ತಾಯಿ ಹಾಗೂ ಇನ್ನಿತರೆ ಸಂಬಂಧಿಗಳು ಮಕ್ಕಳಿಗೆ ಕಥೆಗಳನ್ನು ಹೇಳುವುದು. ಅವರಿಗೆ ಸಂಗೀತ, ಕಲೆ, ಚಿತ್ರಕಲೆಗಳನ್ನು ಕಲಿಸಿಕೊಡುತ್ತಿದ್ದರು. ಈಗ ಮಕ್ಕಳಿಗೆ ಅಂತಹ ವಾತಾವರಣ ನಿರ್ಮಾಣವಾಗುವುದು ಅಸಾಧ್ಯ. ಏಕೆಂದರೆ ಇಂದು ವಿಭಕ್ತ ಕುಟುಂಬ. ಯಾಂತ್ರಿಕ ಜೀವನ, ಒತ್ತಡದ ಬದುಕು ಕಾರಣವಾಗಿದೆ. ಆದ್ದರಿಂದ ಇಂತಹ ಮಕ್ಕಳ ಶಿಬಿರಗಳು ಅತ್ಯಂತ ಸಹಕಾರಿಯಾಗಿವೆ ಎಂದು ಹೇಳಿದರು.

     ಬಳ್ಳಾರಿಯ ಚಿತ್ರಕಲಾವಿದ ಉಮೇಶ್, ಬಳ್ಳಾರಿಯ ರಂಗನಿರ್ದೇಶಕ ಸಣ್ಣ ತಾಯಣ್ಣ ಅವರು ಮಾತನಾಡಿದರು. ವೇದಿಕೆಯ ಮೇಲೆ ಸಂಗೀತ ಕಲಾವಿದ ರಾಘವೇಂದ್ರ ಗುಡದೂರು, ನೃತ್ಯ ಶಿಕ್ಷಕಿ ಹೇಮಾವತಿ, ರಂಗಕಹಳೆ ಸಾಂಸ್ಕತಿಕ ಸಂಘದ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಅವರು ಹಾಜರಿದ್ದರು. ಆರಂಭದಲ್ಲಿ ಸ್ಪೂರ್ತಿ ಮತ್ತು ತಂಡದಿಂದ ಪ್ರಾರ್ಥನೆ ಜರುಗಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link