ತುಮಕೂರು
ಶಿಕ್ಷಣವೆಂದರೆ ಕೇವಲ ಅಂಕಪಟ್ಟಿ, ಪ್ರಮಾಣಪತ್ರ, ಪರೀಕ್ಷೆಗಳಲ್ಲ. ಶಾಲಾ ಕಾಲೇಜುಗಳು ಮೋಜು ಮಸ್ತಿಗಳ ತಾಣಗಳಲ್ಲ. ಇಟ್ಟಿಗೆ ಸಿಮೆಂಟ್ಗಳಿಂದ ನಿರ್ಮಿತ ಸುಂದರ ಕಟ್ಟಡಗಳಷ್ಟೇ ಅಲ್ಲ. ಅವು ಲಲಿತಕಲೆಗಳ ತವರು. ಜೀವನದಲ್ಲಿ ಎಡತಾಕುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಎದೆಗುಂದದೆ ಧೈರ್ಯವಾಗಿ ಎದುರಿಸಬಲ್ಲ ಕನಿಷ್ಠ ಸಾಮಥ್ರ್ಯಗಳನ್ನು ಕಲಿಸಿಕೊಡುವ ಆಲಯಗಳು ಎಂದು ಲೇಖಕ ಹಾಗೂ ಸಾಮಾಜಿಕ ಚಿಂತಕ ಹೊಸಕೆರೆ ರಿಜ್ವಾನ್ಭಾಷ ಅಭಿಪ್ರಾಯ ಪಟ್ಟರು.
ಗುರುವಾರದಂದು ತುಮಕೂರಿನ ಭೀಮಸಂದ್ರದಲ್ಲಿರುವ ಶಾಹೀದ್ ಗ್ಲೋಬಲ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಮುಸ್ಲಿಂಮೌಲ್ವಿಗಳ ಶೈಕ್ಷಣಿಕ ಚಿಂತನಾಗೋಷ್ಠಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಎಂಬ ವಿಷಯವಾಗಿ ನಗರದ 100ಕ್ಕೂ ಹೆಚ್ಚು ಮೌಲ್ವಿಗಳ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಚಾರ ಮಂಡಿಸಿದರು.
ಸಂಸ್ಕಾರದೊಂದಿಗೆ ಬದುಕುವ ಕಲೆಯೇ ಶಿಕ್ಷಣ. ಇಂಥ ಸಂಸ್ಕಾರಯುತ ಶಿಕ್ಷಣ ಪಡೆದು ವಿದ್ಯಾರ್ಥಿಗಳು ವಿಶೇಷವಾಗಿ ಮುಸ್ಲೀಂ ಸಮುದಾಯದ ಮಕ್ಕಳು ಮೂಲಭೂತವಾದವನ್ನು ಬದಿಗಿಟ್ಟು ಮಾನವತಾವಾದದೊಂದಿಗೆ ಶಾಲಾಕಾಲೇಜುಗಳಿಂದ ಹೊರಬರಬೇಕಿದೆ. ಮಸೀದಿ ಮದರಸಾಗಳಲ್ಲಿ ವಿಜ್ಞಾನ ತಂತ್ರಜ್ಞಾನ, ಶೈಕ್ಷಣಿಕ ಚಟುವಟಿಕೆಗಳು ಸುಶಿಕ್ಷತರಾಗಿ ಸಮಾಜದಲ್ಲಿ ಸರ್ವಧರ್ಮ ಸಮನ್ವಯತೆ ಯೊಂದಿಗೆ ಹೇಗೆ ಬದುಕಬೇಕೆಂಬ ಉಪನ್ಯಾಸಗಳನ್ನು ನೀಡುವ ಮೂಲಕ ಸಮುದಾಯದ ಮಕ್ಕಳನ್ನು ಸಾಮರಸ್ಯದ ಮುಖ್ಯವಾಹಿನಿಗೆತರುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ವಹಿಸಬೇಕಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮೌಲನಾಜಿಯಾಉರ್ ರೆಹಮಾನ್, ನೇಮತ್ಉಲ್ಲಾ, ಅಜ್ಗರ್ ಮಾತನಾಡಿ ತಮ್ಮ ವಿಚಾರಗಳನ್ನು ಮಂಡಿಸಿದರು. ನಂತರ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಅಫ್ಜಲ್ಷರೀಫ್ ಸಂಸ್ಥೆಯು ದೇಶದಾದ್ಯಂತ ಶಾಖೆಗಳನ್ನು ಹೊಂದಿದ್ದು, ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಬಡ ಮಕ್ಕಳೂ ಸಹ ತಮ್ಮಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಾಹೀನ್ ಗ್ಲೋಬಲ್ ಕಾಲೇಜು ನೆರವಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ