ಹಾವೇರಿ :
ವೀರಶೈವರು, ವಿರಕ್ತರು, ಸಿದ್ಧಾರೂಢರು ಮತ್ತು ನಿರಂಜನರರೆಲ್ಲರೂ ಯಾವುದೇ ಶುಭ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಪಂಚ ಕಳಸವನ್ನು ಹೂಡುತ್ತಾರೆ. ಈ ಪಂಚಕಳಸಗಳೇ ಪಂಚಾಚಾರ್ಯರ ಸಂಕೇತವಾಗಿದೆ ಎಂದು ಕರ್ಜಗಿ ಗೌರಿಮಠ ಹಾಗೂ ನಗರದ ಗುರುಪಾದದೇವರಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಜಿಗಳ 9ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಧರ್ಮೋತ್ತೇಜಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮದ ಮೊದಲ ದಿನದ ಬೆಳಗಿನ ಕಾರ್ಯಕ್ರಮ ಷಟಸ್ಥಳ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು.
ಪಂಚಾಚಾರ್ಯರು ಎಲ್ಲ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗದ ಹಿನ್ನಲೆಯಲ್ಲಿ ಅವರ ಸಾನಿಧ್ಯದ ಸಂಕೇತಗಳಾಗಿ ಈ ಪಂಚಕಳಸಗಳನ್ನು ಹೂಡಲಾಗುತ್ತದೆ. ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯರಿಂದ ಸ್ಥಾಪಿತರಾದ ಪಂಚಾಚಾರ್ಯರನ್ನು ಬಿಟ್ಟು ವೀರಶೈವ ಧರ್ಮವನ್ನು ಉಹಿಸುವುದಕ್ಕೂ ಸಾಧ್ಯವಿಲ್ಲ ಎಂದರು.
ಷಟಸ್ಥಳ ಧ್ವಜದಲ್ಲಿ ವೀರಶೈವ ಧರ್ಮದ ಪಂಚ ಪೀಠಗಳ ಸೂಚಕ ವರ್ಣಗಳನ್ನೊಳಗೊಂದ ಧ್ವಜವಾಗಿದ್ದು. ಈ ಐದು ವರ್ಣಗಳ ಧ್ವಜಾರೋಹಣ ಮಾಡುವ ಮೂಲಕ ಪ್ರತಿಯೊಂದು ಶುಭ ಕಾರ್ಯಗಳಿಗೆ ನಾಂದಿ ಹಾಡಿದಂತೆ. ಆದ್ದರಿಂದ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಮಾಜದ ಎಲ್ಲ ಧರ್ಮಿಯರನ್ನು ವಗ್ಗೂಡಿಸುವ ಸಲುವಾಗಿ ಸಾರ್ವಜನಿಕ ಹಬ್ಬ ಹರಿದಿನಗಳು ಮತ್ತು ಜಾತ್ರೆಗಳನ್ನು ಆಚರಿಸಲಾಗುತ್ತ ಬರಲಾಗಿದೆ. ಮನುಷ್ಯನಿಗೆ ಕೇವಲ ದುಡಿಮೆಯೊಂದಿದ್ದರೆ ಸಾಲದು ಮನಸ್ಸನ್ನು ಸಂತೋಷವಾಗಿಡುವುದಕ್ಕೆ ಮನೆಗಳಲ್ಲಿಯೋ ಹಬ್ಬ ಹರಿದಿದಿನಗಳನ್ನು ಆಚರಿಸಲಾಗುತ್ತಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವುದಕ್ಕೆ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಬಹಳ ಅವಶ್ಯಕವಾಗಿದೆ ಎಂದರು.
ಇಂದಿನ ಮಕ್ಕಳಿಗೆ ಕೇವಲ ಶಿಕ್ಷಣವನ್ನು ನೀಡಿದರೆ ಸಾಲದು, ಅವರಲ್ಲಿ ಮೌಲ್ಯಯುತ ಧಾರ್ಮಿಕ, ಸಾಂಸ್ಕತಿಕ ಚಿಂತನೆಗಳು ಹಾಗೂ ಸಂಸ್ಕಾರವನ್ನು ನಿಡುವುದರತ್ತ ಗಮನವನ್ನು ಕೊಡಬೇಕು ಅಂದಾಗ ಮಾತ್ರ ಸಮಾಜ ಒಗ್ಗೂಡಿಕೊಂಡು ನೆಮ್ಮದಿಯಿಂದ ಸಾಗುವುದಕ್ಕೆ ಸಾಧ್ಯವಾಗುತ್ತದೆಯಲ್ಲದೆ ಈ ಮಕ್ಕಳಲ್ಲಿಯೂ ಧರ್ಮ ಜಾಗೃತಿ ಮೂಡುತ್ತದೆ ಎಂದು ಹೇಳಿದರು.
ಷಟಸ್ಥಳ ಧ್ವಜಾರೋಹಣದ ಸಾನಿಧ್ಯವನ್ನು ಹರಸೂರು ಬಣ್ಣದಮಠದ ಅಭಿನವರುದ್ರಚನ್ನಮಲ್ಲಿಕಾರ್ಜುನ ಸ್ವಾಮಿಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷ ಜಗದೀಶ ಕನವಳ್ಳಿ, ಗೌರವಾಧ್ಯಕ್ಷ ಶಿವಬಸಪ್ಪ ಮತ್ತಿಹಳ್ಳಿ, ನಗರಸಭಾ ಸದಸ್ಯರಾದ ಮಲ್ಲಿಕಾರ್ಜು ಸಾತೇನಹಳ್ಳಿ, ಶಿವಯೋಗಿ ಹುಲೀಕಂತಿಮಠ, ರವಿ ದೊಡ್ಡಮನಿ, ಗಣ್ಯರಾದ ಕರಬಸಪ್ಪ ಹಲಗಣ್ಣನವರ, ತಮ್ಮಣ್ಣ ಮುದ್ದಿ, ಬಸವರಾಜ ಜಾಬೀನ, ಮಡಿವಾಳೆಪ್ಪ ಸಾತೇನಹಳ್ಳಿ, ಮಲ್ಲಿಕಾರ್ಜುನ ಕಟ್ಟಿಮನಿ, ಶಿವರಾಜ ಮತ್ತಿಹಳ್ಳಿ, ಮಲಕಣ್ಣ ಅಂಗಡಿ, ಮಹಲಿಂಗಸ್ವಾಮಿ ಹಿರೇಮಠ, ವೀಣಾ ಹಲಗಣ್ಣನವರ, ಸೌಭಾಗ್ಯ ಸಾತೇನಹಳ್ಳಿ, ಮಮತಾ ಜಾಬೀನ, ಶಶಿಕಲಾ ಸಾತೇನಹಳ್ಳಿ, ಶಾಂತಾ ಡಾವಣಗೇರಿ, ಅಕ್ಕಮ್ಮ ಕೂಡ್ಲಪ್ಪನವರ, ಮಂಜುಳಾ ಅಕ್ಕಿ, ರೂಪಾ ಕೂಡ್ಲಪ್ಪನವರ ಸೇರಿದಂತೆ ಅನೇಕರಿದ್ದರು.