ಬ್ಯಾಡಗಿ:
ವೇಗವಾಗಿ ಚಲಿಸುತ್ತಿದ್ದ ಡಸ್ಟರ್ ಕಾರೊಂದು ಕ್ಯಾಂಟರ್‍ಗೆ (ಲಾರಿ) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾರಿನ ಚಾಲಕ ಮೃತಪಟ್ಟಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ-4 ಮೇಲೆ ಛತ್ರ ಗ್ರಾಮದ ಬಳಿ ನಡೆದಿದೆ.
ಮೃತವ್ಯಕ್ತಿಯನ್ನು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಿಟ್ಟೂರ ಗ್ರಾಮದ ನಾಗರಾಜ ಶಿವಾಜಿ ಪಾಟೀಲ(32) ಎಂದು ಗುರುತಿಸಲಾಗಿದ್ದು ಗಾಯಗೊಂಡ ವ್ಯಕ್ತಿಯನ್ನು ಅದೇ ಗ್ರಾಮದ ಮಂಜುನಾಥ ಎನ್ನಲಾಗಿದ್ದು ಇವರನ್ನು ದಾವಣಗರೆಯ ಎಸ್‍ಎಸ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಯಿತು.
ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಕಾರು ಮೊದಲು ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದಿದೆ, ಬಳಿಕ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಕ್ಯಾಂಟರ್‍ಗೆ ಡಿಕ್ಕಿ ಸಂಭವಿಸಿದ್ದು ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಚಾಲಕ ನಾಗರಾಜ ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಕಾರು ನುಜ್ಜು ಗುಜ್ಜಾಗಿದ್ದರಿಂದ ನಾಗರಾಜ ಮೃತದೇಹ ತೆಗೆಯಲು ಜೆಸಿಬಿ ಹಾಗೂ ಕಟರ್‍ಗಳನ್ನು ಬಳಸಲಾಗಿದ್ದು ಮೃತದೇಹ ಹೊರತೆಗೆಯಲು ಪೊಲೀಸರು ಹರ ಸಾಹಸಪಡುತ್ತಿದ್ದ ದೃಶ್ಯಗಳು ಕಂಡು ಬಂದವು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಷಟ್ಪಥ (ಸಿಕ್ಸ್‍ಲೈನ್) ಕಾಮಗಾರಿ ನಡೆಯುತ್ತಿದ್ದು ಅಸುರಕ್ಷಿತ ಚಾಲನೆಯಿಂದಾಗಿ ಅಪಘಾತ ಸಂಖ್ಯೆ ಹೆಚ್ಚಾಗಲು ಕಾರಣವೆನ್ನಲಾಗುತ್ತಿದೆ, ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಅಥವಾ ಗುತ್ತಿಗೆದಾರರು ಕಾಮಗಾರಿ ಪ್ರಗತಿ ಯಲ್ಲಿರುವುದರ ಬಗ್ಗೆ ಸದರಿ ಸ್ಥಳದಲ್ಲಿ ಸೂಚನಾ ಫಲಕಗಳನ್ನು ನಿರ್ಮಿಸದೇ ಇರುವುದು ಅಪಫಾತಕ್ಕೆ ಕಾರಣ ವೆಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದ್ದು ತನಿಖೆ ಮುಂದುವರೆದಿದೆ.