ನಾಳೆಯಿಂದ ದಂಡಿನಶಿವರ ಹೊನ್ನಾದೇವಿ ಜಾತ್ರೆ

ತುರುವೇಕೆರೆ

      ತಾಲ್ಲೂಕಿನ ದಂಡಿನಶಿವರ ಗ್ರಾಮದ ಅಧಿದೇವತೆ ಶ್ರೀ ಹೊನ್ನಾದೇವಿಯವರ ಜಾತ್ರಾ ಮಹೋತ್ಸವವು ಇದೇ 7 ರಿಂದ ಪ್ರಾರಂಭಗೊಂಡು, 11 ರವರೆಗೆ ಆಸುಪಾಸಿನ ಭಕ್ತರಿಂದ ಒಂದು ವಾರಗಳ ಕಾಲ ಶ್ರದ್ದಾಭಕ್ತಿಯಿಂದ ಆಚರಣೆಗೊಳ್ಳಲಿದೆ ಎಂದು ದೇಗುಲದ ಧರ್ಮದರ್ಶಿ ಸಮಿತಿ ತಿಳಿಸಿದೆ.

         ಮೇ 7 ರಂದು ಮಂಗಳವಾರ ಮಡೆ ಉತ್ಸವ, 8 ರಂದು ಬುಧವಾರ ಹೊನ್ನಾದೇವಿಗೆ ಆರತಿ ಹಾಗೂ ಸೋಮೋತ್ಸವ, 9ರಂದು ಗುರುವಾರ ಬಾಯಿಬೀಗ ಹಾಗೂ ಚಂದ್ರಮಂಡಲೋತ್ಸವ, 10 ರಂದು ಶುಕ್ರವಾರ ಮಹಾರಥೋತ್ಸವ, 11 ರಂದು ಶನಿವಾರ ಧೂಪದ ಸೇವೆ, ಅನಂತರ ಕಂಬ ವಿಸರ್ಜನಾ ಕಾರ್ಯಕ್ರಮಗಳು ನಡೆಯಲಿದೆ.

       ಮಂಗಳವಾರ ಸಂಜೆ ಮಡೆ ಉತ್ಸವದ ಅಂಗವಾಗಿ ಡೊಳ್ಳುಕುಣಿತ, ಜಾನಪದ ಕಲಾ ಪ್ರದರ್ಶನ, ಬುಧವಾರ ಸಂಜೆ ರಾಷ್ಟ್ರಕವಿ ಕುವೆಂಪು ವಿರಚಿತ ಜಲಗಾರ ನಾಟಕ ಪ್ರದರ್ಶನ, ಗುರುವಾರ ಸಂಜೆ ರಾಜಸುಯಾಗ ಯಕ್ಷಗಾನ, ಶುಕ್ರವಾರ ಸಂಜೆ ಕುರುಕ್ಷೇತ್ರ ನಾಟಕಗಳು ನಡೆಯಲಿವೆ.

      ಶುಕ್ರವಾರ ಮಹಾರಥೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ದಾಸೋಹ ಏರ್ಪಡಿಸಿದ್ದು, ಈ ಬಾರಿ ವಿಶೇಷವೆಂಬಂತೆ ಮನರಂಜನಾ ಪೂರಕವಾಗಿ ಜಾಯಿಂಟ್ ವೀಲ್ ನಂತಹ ಆಟೋಪಕರಣಗಳು ವಿಶೇಷ ಆಕರ್ಷಣೆ ನೀಡಲಿದ್ದು, ಆಸುಪಾಸಿನ 33 ಹಳ್ಳಿಗಳ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

      ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ತುಮಕೂರು, ತುರುವೇಕೆರೆ, ಗುಬ್ಬಿ, ನಿಟ್ಟೂರು, ತಿಪಟೂರು ಮಾರ್ಗಗಳಲ್ಲಿ ವಿಶೇಷ ಬಸ್ ಸೌಕರ್ಯವಿರುತ್ತದೆ ಹಾಗೂ ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ಬೀರೂರು, ಚಿಕ್ಕಮಗಳೂರು ಕಡೆಗಳಿಂದ ಆಗಮಿಸುವ ಭಕ್ತರಿಗೆ ರೈಲಿನ ಸೌಕರ್ಯವಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇಗುಲದ ಧರ್ಮದರ್ಶಿ ಸಮಿತಿ ಮನವಿ ಮಾಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link