ನವದೆಹಲಿ:
ಇದೊಂದು ವಿರಳಾತಿವಿರಳ ಪ್ರಕರಣ ಎನ್ನಬಹುದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬರುವ ಮೊದಲು ಮುಂಗಡವಾಗಿ ಕಾಯ್ದಿರಿಸಿದ್ದ ರೈಲು ಟಿಕೆಟ್ ಅನ್ನು ರದ್ದುಗೊಳಿಸಿದಾಗ ಹೆಚ್ಚುವರಿ 35 ರೂಪಾಯಿ ಕಡಿತಗೊಳಿಸಿಕೊಂಡಿದ್ದ ಐಆರ್ಸಿಟಿಸಿ ವಿರುದ್ದ 2 ವರ್ಷ ಹೋರಾಡಿದ ವ್ಯಕ್ತಿ 33 ರೂ. ಹಿಂಪಾವತಿ ಪಡೆದುಕೊಂಡರು. ಆದರೆ ಈಗ ಕಡಿತಗೊಳಿಸಲಾಗಿರುವ 2 ರೂಪಾಯಿಗಾಗಿ ಹೊಸದಾಗಿ ಹೋರಾಟ ಆರಂಭಿಸಿದ್ದಾರೆ.
ಕೋಟಾ ಮೂಲದ ಸುಜಿತ್ ಎಂಬವವರು 30 ವರ್ಷದ ಇಂಜಿನಿಯರ್ 2017ರ ಜುಲೈ 2ರಂದು ಕೋಟಾದಿಂದ ದೆಹಲಿಗೆ ತೆರಳಲು ಗೋಲ್ಡನ್ ಟೆಂಪಲ್ ಮೇಲ್ ರೈಲಿನಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದರು. ಆಗಿನ್ನೂ ಜಿಎಸ್ಟಿ ಕೂಡ ಜಾರಿಗೆ ಬಂದಿರಲಿಲ್ಲ. 765 ರೂ. ಟಿಕೆಟ್ ಶುಲ್ಕ ಪಾವತಿಸಿದ್ದರೂ ಅವರ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಟಿಕೆಟ್ ಅನ್ನು ರದ್ದುಗೊಳಿಸಿದ್ದರು. ತೆರಿಗೆ ಸಹಿತವಾಗಿ 100 ರೂ. ಕಡಿತಗೊಳಿಸಿದ್ದ ಐಆರ್ಸಿಟಿಸಿ 665 ರೂ.ಗಳನ್ನು ಸುಜಿತ್ ಅವರ ಖಾತೆಗೆ ವರ್ಗಾವಣೆ ಮಾಡಿತ್ತು.
ವಾಸ್ತವವಾಗಿ ಐಆರ್ಸಿಟಿಸಿ 65 ರೂಪಾಯಿ ಮಾತ್ರ ಶುಲ್ಕವನ್ನು ಮಾತ್ರ ಕಡಿತಗೊಳಿಸಿಕೊಂಡು ಉಳಿದ ಮೊತ್ತ ಹಿಂದಿರುಗಿಸ ಬೇಕಿತ್ತು. ಆದರೆ, 65 ರೂಪಾಯಿ ಮತ್ತು ಸೇವಾ ತೆರಿಗೆ ರೂಪದಲ್ಲಿ 35 ರೂಪಾಯಿ ಸೇರಿಸಿ 100 ರೂಪಾಯಿಗಳನ್ನು ಕಡಿತಗೊಳಿಸಿ ಕೊಂಡಿತ್ತು. ಈ ಹಿನ್ನೆಲೆಯಲ್ಲಿ 35 ರೂ.ಗಳನ್ನು ಹಿಂಪಡೆಯಲು 2017ರಿಂದ ಹೋರಾಟ ಆರಂಭಿಸಿದ್ದಾಗಿ ಸುಜಿತ್ ತಿಳಿಸಿದ್ದಾರೆ.
ಜಿಎಸ್ಟಿ ಜಾರಿಗೆ ಬರುವ ಮುನ್ನವೇ 35 ರೂಪಾಯಿ ಸೇವಾ ತೆರಿಗೆ ಕಡಿತಗೊಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಣ ಹಿಂದಿರುಗಿಸುವಂತೆ ಮನವಿ ಮಾಡಿದಾಗಲೆಲ್ಲ ಐಆರ್ಸಿಟಿಸಿ ಕೊಡುವುದಾಗಿ ಭರವಸೆ ನೀಡಿತ್ತೇ ಹೊರತು, ಹಣ ಹಿಂದಿರುಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ, ಜಿಎಸ್ಟಿ ಜಾರಿಗೆ ಬರುವ ಮುನ್ನ ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದಿರಿಸಿದ್ದು, ಜಾರಿಗೆ ಬಂದ ಬಳಿಕ ರದ್ದುಗೊಳಿಸಿದ್ದರೆ ಸೇವಾ ತೆರಿಗೆ ಕಡಿತಗೊಳಿಸಿಕೊಂಡು ಬಾಕಿ ಮೊತ್ತವನ್ನು ಹಿಂದಿರುಗಿಸಬಹುದು ಎಂಬ ಒಕ್ಕಣೆಯುಳ್ಳ ವಾಣಿಜ್ಯ ಸುತ್ತೋಲೆ ನಂ.43ರ ಉದಾಹರಣೆ ನೀಡಿತ್ತು.
ಜಿಎಸ್ಟಿ ಜಾರಿಗೆ ಬರುವ ಮೊದಲು ಮುಂಗಡವಾಗಿ ಟಕೆಟ್ ಕಾಯ್ದಿರಿಸಿದ್ದು, ಜಿಎಸ್ಟಿ ಜಾರಿಗೆ ಬಂದ ಬಳಿಕ ಟಿಕೆಟ್ ಅನ್ನು ರದ್ದುಗೊಳಿಸಿದ್ದರೆ ಸೇವಾ ತೆರಿಗೆ ಕಡಿತಗೊಳಿಸಿಕೊಳ್ಳಬಾರದು ಎಂದು ಐಆರ್ಸಿಟಿಸಿ ತೀರ್ಮಾನಿಸಲಾಗಿದೆ. ಆದ್ದರಿಂದ, ಸೇವಾ ತೆರಿಗೆ ರೂಪದಲ್ಲಿ ಕಡಿತಗೊಳಿಸಲಾಗಿರುವ 35 ರೂ.ಗಳನ್ನು ಹಿಂದಿರುಗಿಸುವುದಾಗಿ ಐಆರ್ಸಿಟಿಸಿ ಸುಜಿತ್ ಸ್ವಾಮಿಗೆ ತಿಳಿಸಿತ್ತು. ಆದರೆ, ಹಣವನ್ನು ಕೊಟ್ಟಿರಲಿಲ್ಲ.
2018ರಲ್ಲಿ ಲೋಕ್ ಅದಾಲತ್ನಲ್ಲಿ ದೂರು ದಾಖಲಿಸಿದ್ದ ಸುಜಿತ್ ಸ್ವಾಮಿ ಅವರ ಈ ಅರ್ಜಿಯ ವಿಚಾರಣೆ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದ ಲೋಕ್ ಅದಾಲತ್ನ ನ್ಯಾಯಮೂರ್ತಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಕೊನೆಗೂ ಬಿಟ್ಟುಬಿಡದೆ ಹೋರಾಟ ಮುಂದುವರಿಸಿದ ಸುಜಿತ್ಗೆ 2019ರ ಮೇ 1ರಂದು ನ್ಯಾಯ ದೊರಕಿದೆ. ಆದರೆ, ವಾಗ್ದಾನದಂತೆ 35 ರೂ. ಬದಲು 33 ರೂ.ಗಳನ್ನು ಅವರ ಖಾತೆಗೆ ಐಆರ್ಸಿಟಿಸಿ ವರ್ಗಾಯಿಸಿದೆ. ಈಗ ಮತ್ತಿಮ್ಮೆ 2 ರೂ ಗೋಸ್ಕರ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








