ಚಿತ್ರದುರ್ಗ:
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಭೀಕರ ಬರಗಾಲ ಎದುರಾಗಿರುವುದರಿಂದ ಖಾಸಗಿ ಟ್ಯಾಂಕರ್‍ಗಳನ್ನು ವಶಪಡಿಸಿಕೊಂಡು ಜನರಿಗೆ ಮೊದಲು ನೀರು ಪೂರೈಸಿ ಎಂದು ಎಂ.ಎಲ್.ಸಿ. ಜಿ.ರಘುಆಚಾರ್ ತಾಲೂಕು ಪಂಚಾಯಿತಿ ಹಾಗೂ ನಗರಸಭೆಯವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಮೆದೇಹಳ್ಳಿ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಗುರುವಾರ ದಿಢೀರ್ ಪ್ರತ್ಯಕ್ಷರಾದ ಜಿ.ರಘುಆಚಾರ್ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಹಾಗೂ ನಗರಸಭೆ ಆಯುಕ್ತರೊಡನೆ ಗುರುವಾರ ಖಾಸಗಿಯಾಗಿ ಚರ್ಚಿಸಿ ಇನ್ನೆರಡು ದಿನಗಳಲ್ಲಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ಜನರಿಗೆ ಕುಡಿಯುವ ನೀರು ಸರಬರಾಜಾಗಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೊತೆಯಲ್ಲಿಯೂ ಮಾತನಾಡಿದ್ದೇನೆ. ಕೆಲವು ಪಟ್ಟಣ ಪಂಚಾಯಿತಿಗಳಲ್ಲಿ ನೀರು ಸರಬರಾಜು ಮಾಡಿರುವ ಬಿಲ್ ಇನ್ನು ಬಾಕಿ ಉಳಿಸಿಕೊಂಡಿರುವುದರಿಂದ ಟ್ಯಾಂಕರ್ ಮಾಲೀಕರುಗಳು ನೀರು ಪೂರೈಸುತ್ತಿಲ್ಲ. ಖಾಸಗಿ ಬೋರ್‍ವೆಲ್‍ಗಳನ್ನು ವಶಪಡಿಸಿಕೊಳ್ಳುವಂತೆ ಖಾಸಗಿ ಟ್ಯಾಂಕರ್‍ಗಳನ್ನು ವಶಕ್ಕೆ ತೆಗೆದುಕೊಂಡು ನೀರು ಸರಬರಾಜಿಗೆ ಮೊದಲ ಆದ್ಯತೆ ಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮೇ.13 ಮತ್ತು 14 ರಂದು ಚಿತ್ರದುರ್ಗ ನಗರಸಭೆಯ 35 ವಾರ್ಡ್‍ಗಳಲ್ಲಿಯೂ ಸಂಚರಿಸಿ ನೀರಿನ ಅಭಾವವನ್ನು ವೀಕ್ಷಿಸಿ ಸಮರ್ಪಕ ನೀರು ಪೂರೈಕೆಗೆ ಏನು ಕ್ರಮಕೈಗೊಳ್ಳಬೇಕೆಂಬುದನ್ನು ಅಧಿಕಾರಿಗಳ ಜೊತೆ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ. ಒಂದು ಟ್ಯಾಂಕರ್‍ಗೆ ಸರ್ಕಾರ 650 ರೂ.ಗಳನ್ನು ನಿಗಧಿಪಡಿಸಿದೆ ನಾನು ಕೈಯಿಂದ ನೂರು ರೂ. ಹಾಕಿ ಟ್ಯಾಂಕರ್ ಮಾಲೀಕರಿಗೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ನೀರಿಗೆ ಕೊರತೆಯಾಗಬಾರದು.
ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ರಾಜ್ಯಾದ್ಯಂತ ಎಲ್ಲೆಲ್ಲಿ ಬರಗಾಲವಿದೆಯೋ ಅಲ್ಲೆಲ್ಲಾ ನೀರು ಪೂರೈಕೆಗೆ ಖಾಸಗಿ ಟ್ಯಾಂಕರ್‍ಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಪೆಂಡಿಂಗ್ ಬಿಲ್‍ಗಳನ್ನು ಪಾವತಿ ಮಾಡಲು ಹಣಕಾಸು ಇಲಾಖೆ ಕಾರ್ಯದರ್ಶಿಗೆ ಸೂಚಿಸಬೇಕು ಎಂದು ಒತ್ತಾಯಿಸಿದ ಜಿ.ರಘುಆಚಾರ್ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬರಕ್ಕೆ ಸಂಬಂಧಿಸಿದಂತೆ ಎಷ್ಟು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎನ್ನುವುದನ್ನು ಒಮ್ಮೆ ಮುಖ್ಯಮಂತ್ರಿಗಳು ಪ್ರಗತಿ ಪರಿಶೀಲಿಸಲಿ. ಬೇಜವಾಬ್ದಾರಿ ವಹಿಸುವ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳನ್ನು ಅಮಾನತ್ತುಗೊಳಿಸಿ ಚುರುಕು ಮುಟ್ಟಿಸಲಿ ಎಂದು ಮನವಿ ಮಾಡಿದರು.
ಕುಡಿಯುವ ನೀರು ಜನರ ಮೂಲಭೂತ ಹಕ್ಕು. ರಾಜ್ಯದ 220 ಶಾಸಕರು ಹಾಗೂ 75 ಎಂ.ಎಲ್.ಸಿ.ಗಳು ಜನರಿಗೆ ನೀರು ಕೊಡುವಲ್ಲಿ ವಿಫಲರಾಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಜನಹಿತ ಕಾಪಾಡದ ಅಧಿಕಾರಿಗಳನ್ನು ಜಿಲ್ಲೆಯಿಂದ ಓಡಿಸಿ ಪ್ರತಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಯಾ ಜಿಲ್ಲೆಯಲ್ಲಿ ಮೊಕ್ಕಾಂ ಹೂಡುವಂತೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಇನ್ನು ಹತ್ತು ವರ್ಷ ರಾಜಕಾರಣಕ್ಕೆ ಬರುವುದಿಲ್ಲ:
ಇನ್ನು ಹತ್ತು ವರ್ಷ ಚಿತ್ರದುರ್ಗದಿಂದ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ ಚಿತ್ರದುರ್ಗದಿಂದ ಮನೆ ಖಾಲಿ ಮಾಡಿ ಓಡಿ ಹೋಗುವುದಿಲ್ಲ. ಇಲ್ಲಿಯೇ ಇದ್ದು ಜನರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಎಂ.ಎಲ್.ಸಿ. ಜಿ.ರಘುಆಚಾರ್ ತಮ್ಮ ಮನಸ್ಸಿನಲ್ಲಿರುವ ಬೇಗುದಿಯನ್ನು ಹೊರಹಾಕಿದರು.
ಮೆದೇಹಳ್ಳಿ ರಸ್ತೆಯಲ್ಲಿರುವ ನಿವಾಸಕ್ಕೆ ಗುರುವಾರ ಆಗಮಿಸಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿ ಗಳೊಡನೆ ಖಾಸಗಿಯಾಗಿ ಚರ್ಚಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತ ಹಣ, ಅಧಿಕಾರ ಯಾವಾಗ ಬೇಕಾದರು ಬರುತ್ತೆ. ಹೋಗುತ್ತೆ. ಆದರೆ ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿರುವುದರಿಂದ ಇನ್ನು ಹತ್ತು ವರ್ಷಗಳ ಕಾಲ ರಾಜಕಾರಣಕ್ಕೆ ಬರುವುದಿಲ್ಲ. ಹಾಗಂತ ಚಿತ್ರದುರ್ಗವನ್ನು ಮರೆಯುತ್ತೇನೆ ಎಂದುಕೊಳ್ಳಬೇಡಿ. ರಾಜಕೀಯವಾಗಿ ನನಗೆ ಭವಿಷ್ಯ ಕೊಟ್ಟ ದುರ್ಗವನ್ನು ಎಂದಿಗೂ ಮರೆಯುವುದಿಲ್ಲ ಇಲ್ಲಿಯೇ ಇರುತ್ತೇನೆ ಎಂದು ಹೇಳಿದರು.
ರಾಜ್ಯದ ಇತಿಹಾಸದಲ್ಲಿಯೇ ಚಿತ್ರದುರ್ಗದ ಜನ ಜಾತಿ ನೋಡಿ ಓಟು ಹಾಕುವವರಲ್ಲ. ವ್ಯಕ್ತಿ ನೋಡಿ ಓಟು ಹಾಕುತ್ತಾರೆ ಎನ್ನುವುದು ನಾನು ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಾಗ ಗೊತ್ತಾಯಿತು. ಹಿರಿಯರ ಕಾಲಿಗೆ ನಮಸ್ಕರಿಸಿದೆ ಮತ ನೀಡಿದರು ಎಂದು ಕೃತಜ್ಞತೆ ಸಮರ್ಪಿಸಿದರು.
ಬೇರೆ ಜಿಲ್ಲೆಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆಡಳಿತಕ್ಕೆ ನಾನೇ ಹೋಗಬೇಕೆಂದಿಲ್ಲ. ಡಿ.ಸಿ., ಎಸ್.ಪಿ., ಸಿ.ಇ.ಓ., ತಹಶೀಲ್ದಾರ್ ಇರುತ್ತಾರೆ. ಆಡಳಿತವನ್ನು ಅವರು ನೋಡಿಕೊಳ್ಳುತ್ತಾರೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನನ್ನ ಕೈಯಿಂದ ಹಣ ನೀಡುವುದಿದ್ದರೆ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
