ಬೆಂಗಳೂರು:
ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿಯುತ್ತಲೇ ನಡೆದ ಎಕ್ಸಿಟ್ ಪೋಲ್‍ನಲ್ಲಿ ಸಂಪೂರ್ಣವಾಗಿ ಮೋದಿಯ ಅಲೆ ಹೆಚ್ಚಾಗಿ ಕಂಡು ಬಂದಿದ್ದು, ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಬಿಂಬಿಸಲಾಗಿತ್ತು. ಈ ಸಂಬಂಧ ಕೈನಾಯಕರು ಸೇರಿದಂತೆ ಇನ್ನಿತರರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ.
ಎಕ್ಸಿಟ್ ಪೋಲ್ ನಾಟ್ ಎ ಎಕ್ಸಾಟ್ ಪೋಲ್:
ಬೆಂಗಳೂರಿನ ಸದಾಶಿವನಗರದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಎಕ್ಸಿಟ್ ಪೋಲ್ ನಾಟ್ ಎ ಎಕ್ಸಾಟ್ ಪೋಲ್ ಎಂದಿದ್ದಾರೆ. ಮತದಾರರ ಮೂಡ್ ಸೆಟ್ ಮಾಡಿ, ಇವಿಎಂಗಳನ್ನು ತಿರುಚುವ ಹುನ್ನಾರ ಇದಾಗಿದೆ. ಈ ಮುಂಚೆಯಿಂದಲೂ ಚಂದ್ರಬಾಬುನಾಯ್ಡು ಅವರು ಇದನ್ನೇ ಪ್ರದೇ ಪದೇ ಹೇಳ್ತಾ ಬಂದಿದ್ದಾರೆ. ಮಾಧ್ಯಮಗಳಲ್ಲಿ ಮೋದಿ ಅಲೆ ಇದೆ. ಎಲ್ಲರೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ. ಮೇ.23ರ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದಿದ್ದಾರೆ.
ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇರುವ ಸಮೀಕ್ಷೆ:
ಚುನಾವಣೋತ್ತರ ಫಲಿತಾಂಶ ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಎಕ್ಸಿಟ್ ಪೋಲ್ ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇದೆ. ಆದರೆ ದೇಶದಲ್ಲಿ ವಸ್ತು ಸ್ಥಿತಿ ಬೇರೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ಮುನ್ನೂರು ಸ್ಥಾನಗಳು ಬರುತ್ತೆ ಎಂದು ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಸಂಪುರ್ಣ ಚಿತ್ರಣ ಗೊತ್ತಾಗುತ್ತೆ. ಈ ಬಾರಿ ಯು.ಪಿ.ಎ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ. ಭಾನುವಾರ ದೆಹಲಿಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಅಲ್ಲಿ ದೊರೆತ ಮಾಹಿತಿ ಪ್ರಕಾರ ಈ ಬಾರಿ ಯುಪಿಎ ಸರ್ಕಾರ ಆಡಳಿತ ನಡೆಸಲಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರುತ್ತೆ ಅಂದರೆ ನಂಬಲು ಸಾಧ್ಯನಾ ? ನನಗೆ ಈ ಎಕ್ಸಿಟ್ ಪೋಲ್‍ನ ಬಗ್ಗೆ ವಿಶ್ವಾಸ ಇಲ್ಲ. ಗ್ರೌಂಡ್ ರಿಯಾಲಿಟಿ ಬೇರೆ ಇದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ 20 ಕ್ಷೇತ್ರದಲ್ಲಿ ಗೆಲುವು ಸಿಗಲಿದೆ. ಇದು ನಮ್ಮ ಲೆಕ್ಕಾಚಾರ, ವಾತಾವರಣ ಕೂಡಾ ಹಾಗೆ ಇದೆ. ನಾವು ಚುನಾವಣಾ ಪ್ರಚಾರ ಆಧರಿಸಿ ಹೇಳ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ 18 ಸೀಟು ಬಿಜೆಪಿಗೆ ಬರುತ್ತೆ ಅಂತ ಹೇಳೋದ್ರಲ್ಲಿ ಅರ್ಥ ಏನಿದೆ ಎಂದರು.
ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ:
ಚುನಾವಣೋತ್ತರ ಸಮೀಕ್ಷೆ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಈ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ಮೋದಿಯವರು ಅಭಿವೃದ್ಧಿಪರ ಆಡಳಿತ ಕೊಡಲಿಲ್ಲ. ಮೋದಿಯವರು ಕೇವಲ ಪ್ರಚಾರದಲ್ಲೇ ಆಡಳಿತ ಮಾಡಿದ್ದಾರೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ರೂ ಅವರಿಗೆ ಇಷ್ಟೊಂದು ಅಂಕಿ ಸಂಖ್ಯೆ ತೋರಿಸ್ತಿರೋದು ಆಶ್ಚರ್ಯವಾಗುತ್ತಿದೆ. ಎಷ್ಟೋ ಎಕ್ಸಿಟ್ ಪೋಲ್ ಗಳು ನಿಜವಾಗಿಲ್ಲ. ಮೊನ್ನೆ ಆಸ್ಟ್ರೇಲಿಯದಲ್ಲೂ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆಗಳು ನಿಜ ಹೇಳಲಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ತಪ್ಪು ಅಥವಾ ಸುಳ್ಳು ಅಂತ ಹೇಳಲ್ಲ. ಕರ್ನಾಟಕದಲ್ಲಿ ಈ ಸಮೀಕ್ಷೆಗಳು ತೋರಿಸಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಪಡೆಯುತ್ತೇವೆ. ರಾಜ್ಯದಲ್ಲಿ ತೋರಿಸಿರುವುದಕ್ಕಿಂತಲೂ ಹೆಚ್ಚು ಸೀಟು ಗೆಲ್ತೇವೆ. ಎರಡೂ ಪಕ್ಷಗಳು ಉತ್ತಮವಾಗಿ ಕೆಲಸ ಮಾಡಿದ್ರೆ ಇನ್ನೂ ಹೆಚ್ಚಾಗಿ ಸೀಟುಗಳನ್ನು ಗೆಲ್ಲಬಹುದಿತ್ತು. ಈ ಸಮೀಕ್ಷೆಗಳನ್ನು ನಾನು ಒಪ್ಪಲ್ಲ. ಮೇ.23ರ ವರೆಗೆ ಕಾಯೋಣ. ಅಂದು ನಿಜವಾದ ಸಮೀಕ್ಷೆ ಬರುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
