ಬೆಂಗಳೂರು
ಜಮೀನನ್ನು ಮಾರಿ ಪರ ಸ್ತ್ರೀ ಜೊತೆ ಹೋಗಿದ್ದ ವ್ಯಕ್ತಿಯೊಬ್ಬ ಹಣ ಖಾಲಿಯಾದ ನಂತರ ಮನೆಗೆ ಹಿಂದಿರುಗಿ ಪತ್ನಿ ಜೊತೆ ಜಗಳವಾಡಿ ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ದಂಪತಿಯನ್ನು ದೊಡ್ಡಬಳ್ಳಾಪುರದ ಚನ್ನಪುರದ ಲಕ್ಷ್ಮಮ್ಮ(55), ನಾರಾಯಣಪ್ಪ(65) ಎಂದು ಗುರುತಿಸಲಾಗಿದೆ ಕೃಷಿಕನಾಗಿದ್ದ ನಾರಾಯಣಪ್ಪ ದುಶ್ಚಟಗಳಿಗೆ ದಾಸನಾಗಿ ಪರ ಸ್ತ್ರೀ ವ್ಯಾಮೋಹ ಹೊಂದಿದ್ದನು.ವರ್ಷದ ಹಿಂದೆ ಒಂದು ಎಕರೆ ಜಮೀನನ್ನು ಹೆಂಡತಿ ಮಕ್ಕಳಿಗೆ ತಿಳಿಸದೆ ಮಾರಾಟ ಮಾಡಿ ಬಂದ ಹಣದೊಂದಿಗೆ ಕೆಲ ದಿನಗಳ ಕಾಲ ಮನೆ ಬಿಟ್ಟು ಹೋಗಿದ್ದನು.
ಈ ಹಣದಿಂದ ಮೋಜು ಮಸ್ತಿ ಮಾಡತ್ತಿದ್ದ ನಾರಾಯಣಪ್ಪ ಹಣ ಖಾಲಿಯಾದ ಮೇಲೆ ಮನೆಗೆ ಬಂದು ಜಗಳ ತೆಗೆಯುತ್ತಿದ್ದನು.ಜಮೀನು ಮಾರಿರುವ ವಿಷಯ ತಿಳಿದು ಹೆಂಡತಿ ಮನೆಯಿಂದ ಆತನನ್ನು ಹೊರ ಹಾಕಿದ್ದರು.ತನ್ನ ತಮ್ಮನೊಂದಿಗೆ ವಾಸವಾಗಿದ್ದ ನಾರಾಯಣಪ್ಪ ಮನೆ ಬಳಿ ಬಂದು ಪದೇ ಪದೇ ಪತ್ನಿ, ಮಕ್ಕಳೊಂದಿಗೆ ಜಗಳವಾಡುತ್ತಿದ್ದ.
ಶನಿವಾರ ರಾತ್ರಿ ಮನೆಗೆ ಬಂದು ಹೆಂಡತಿ ಜೊತೆ ವಿನಾಕಾರಣ ಗಲಾಟೆ ಮಾಡಿದ್ದು ತಡರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ನಾರಾಯಣಪ್ಪ ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಿಷ ಕುಡಿದು ಅಸ್ವಸ್ಥನಾಗಿದ್ದ ನಾರಾಯಣಪ್ಪನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








