ಬೆಂಗಳೂರು
ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮೇ23 ಸಂಜೆಯ ವೇಳೆಗೆ ಭಾರತದ ಅಧಿಕಾರ ಚುಕ್ಕಾಣಿಯನ್ನು ಯಾರು ಹಿಡಿಯುತ್ತಾರೆ?ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ಸಂಸತ್ತಿನ 543 ಸೀಟುಗಳ ಪೈಕಿ 542 ಸೀಟುಗಳಿಗೆ ಚುನಾವಣೆ ನಡೆದಿದ್ದು ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದು,ಜನಸಾಮಾನ್ಯರೂ ತಮ್ಮದೇ ಲೆಕ್ಕಾಚಾರಗಳ ಮೂಲಕ ಭರ್ಜರಿ ಹವಾ ಸೃಷ್ಟಿಯಾಗುವಂತೆ ಮಾಡಿದ್ದಾರೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ಹದಿನೆಂಟು ಕ್ಷೇತ್ರಗಳಲ್ಲಿ ತನ್ನ ಗೆಲುವು ಶತ:ಸ್ಸಿದ್ದ,ಸ್ವಲ್ಪ ವ್ಯತ್ಯಾಸವಾದರೆ ಈ ಸಂಖ್ಯೆ ಇಪ್ಪತ್ತಕ್ಕೇರಬಹುದು ಎಂಬುದು ಬಿಜೆಪಿ ಪಾಳೆಯದ ಲೆಕ್ಕಾಚಾರ.
ಕಾಂಗ್ರೆಸ್ ಪಕ್ಷ ಈ ಬಾರಿ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ತನ್ನದು ಎಂದು ಬಾವಿಸಿದ್ದು ಕಳೆದ ಬಾರಿಯ ಫಲಿತಾಂಶವೇ ಈ ಬಾರಿಯೂ ಹೆಚ್ಚು ಕಡಿಮೆ ಪುನರಾವರ್ತನೆಯಾಗಲಿದೆ.ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟ ಪರಿಣಾಮವಾಗಿ ಒಂದು ಸೀಟು ಕಡಿಮೆಯಾಗಬಹುದು.
ಕಳೆದ ಬಾರಿ ಒಂಭತ್ತು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ತಮಗೆ ಈ ಬಾರಿ ಕನಿಷ್ಟ ಎಂಟು ಸೀಟುಗಳು ಸಿಗಬಹುದು. ಸ್ವಲ್ಪ ಮಟ್ಟಿನ ವ್ಯತ್ಯಾಸವಾದರೆ ಸೀಟುಗಳ ಗಳಿಕೆಯ ಪ್ರಮಾಣ ಆರರಿಂದ ಏಳಕ್ಕೆ ಇಳಿಯಬಹುದು ಎಂದು ರಾಜ್ಯದ ಕೈ ಪಾಳೆಯದ ನಾಯಕರು ಲೆಕ್ಕ ಹಾಕಿದ್ದಾರೆ.
ಜೆಡಿಎಸ್ ಮಾತ್ರ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಗೆಲುವು ನಿಶ್ಚಿತ.ಶಿವಮೊಗ್ಗದಲ್ಲೂ ಈ ಬಾರಿ ಈಡಿಗ ಸಮುದಾಯದ ಮತದಾರರು ಕೈ ಹಿಡಿದಿದ್ದರೆ ನಾಲ್ಕು ಸೀಟುಗಳನ್ನು ಗಳಿಸುವುದು ಖಚಿತ ಎಂದು ಲೆಕ್ಕ ಹಾಕಿದೆ.ರಾಜ್ಯದ ಪರಿಸ್ಥಿತಿ ಹೀಗಿದ್ದರೆ ದೇಶದ ಪರಿಸ್ಥಿತಿ ಬೇರೆಯೇ ಇದ್ದು,ಎಕ್ಸಿಟ್ ಪೋಲ್ ಅದೇನೇ ಸಂಖ್ಯೆಯನ್ನು ಸೂಚಿಸಿದರೂ ಎನ್.ಡಿ.ಎ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಮರಳಿ ಅಧಿಕಾರ ಹಿಡಿಯುವುದಾಗಿ ಬಿಜೆಪಿ ಲೆಕ್ಕ ಹಾಕಿದೆ.ಅದೇ ರೀತಿ ಕಾಂಗ್ರೆಸ್ ಕೂಡಾ ಕಳೆದ ಬಾರಿ ತಾನು ಗೆದ್ದಿದ್ದು 44 ಸೀಟುಗಳಾದರೂ ಈ ಬಾರಿ ಗಳಿಕೆಯ ಪ್ರಮಾಣ ನೂರಾ ಇಪ್ಪತ್ತರಷ್ಟಕ್ಕೆ ತಲುಪಬಹುದು ಎಂದು ಲೆಕ್ಕ ಹಾಕಿದೆ.ಈ ಪ್ರಮಾಣದ ಸೀಟುಗಳು ತನಗೆ ಬಂದರೆ ತೃತೀಯ ಶಕ್ತಿಯ ಯಾರನ್ನಾದರೂ ಪ್ರಧಾನಿ ಪಟ್ಟದಲ್ಲಿ ಕೂರಿಸಿ ಬಚಾವಾಗಬೇಕು ಎಂಬುದು ಅದರ ಲೆಕ್ಕಾಚಾರ.
ತೃತೀಯ ಶಕ್ತಿಗಳ ನಾಯಕರು ಕಾಂಗ್ರೆಸ್ ಪಕ್ಷಕ್ಕೇ ಬೆಂಬಲ ನೀಡಿದರೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಪ್ರಧಾನಿಯಾಗುವಂತೆ ನೋಡಿಕೊಳ್ಳುವುದು.ಇಲ್ಲದೇ ಇದ್ದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ತೃತೀಯ ಶಕ್ತಿಗಳ ಜತೆ ಕೈ ಜೋಡಿಸುವುದು ಸೂಕ್ತ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಈ ಮಧ್ಯೆ ತೃತೀಯ ಶಕ್ತಿಗಳು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಆತ್ಮವಿಶ್ವಾಸದಲ್ಲಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ತೃತೀಯ ಶಕ್ತಿಗಳು ಇನ್ನೂರರಷ್ಟು ಸೀಟುಗಳನ್ನು ಗೆಲ್ಲಬಹುದು ಎಂದು ಬಾವಿಸಿವೆ.
ಆದರೆ ತೃತೀಯ ಶಕ್ತಿಯಲ್ಲಿ ಗೆದ್ದವರೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಒಪ್ಪುತ್ತಾರೆ ಎಂದೇನಲ್ಲ.ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜತೆಗೆ ಸಖ್ಯ ಸಾಧಿಸದೆ ಬಿಜೆಪಿ ವಿರುದ್ಧ ಜಂಟಿಯಾಗಿ ಸ್ಪರ್ಧಿಸಿದ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ತಮ್ಮ ನಿಲುವನ್ನು ಹೇಗೆ ಬೇಕಾದರೂ ಬದಲಿಸಿಕೊಳ್ಳಬಹುದು.
ಕಾಂಗ್ರೆಸ್ ಜತೆ ಹೋಗುವುದು ಒಂದು ಭಾಗವಾದರೆ ಬಿಜೆಪಿಯ ಜತೆ ಹೋಗಲೂ ಅವು ಹಿಂಜರಿಯುವುದಿಲ್ಲ ಎಂಬುದು ರಾಜಕೀಯ ವಲಯಗಳ ಲೆಕ್ಕಾಚಾರ.ಇದಕ್ಕೆ ಹಲವು ಕಾರಣಗಳನ್ನು ಕೊಡುವ ಅವು,ಅದೇನಾದರೂ ವರ್ಕ್ಔಟ್ ಆದರೆ ಬಿಜೆಪಿ ಮರಳಿ ಅಧಿಕಾರದ ಗದ್ದುಗೆ ಹಿಡಿದರೆ ಅಚ್ಚರಿಯೇನಿಲ್ಲ ಎಂದು ವಿವರ ನೀಡುತ್ತವೆ.
ಈ ಮಧ್ಯೆ ಸಂಪೂರ್ಣ ಬಹುಮತ ಸಿಕ್ಕದೆ ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವಂತಾದರೆ ನರೇಂದ್ರಮೋದಿ ಅವರ ಬದಲಿಗೆ ಮರಾಠ ನಾಯಕ ನಿತೀನ್ ಗಡ್ಕರಿ ದೇಶದ ನೂತನ ಪ್ರಧಾನಿಯಾಗಬಹುದು ಎಂಬುದು ಒಂದು ವಲಯದ ಲೆಕ್ಕಾಚಾರ.
ಹೀಗೆ ನಾನಾ ರೀತಿಯ ಲೆಕ್ಕಾಚಾರಗಳ ನಡುವೆ ಮೇ ಇಪ್ಪತ್ಮೂರರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು ಇಡೀ ದೇಶದ ಗಮನ ಫಲಿತಾಂಶದ ಮೇಲೆ ನೆಟ್ಟಿದೆ.