ಬೆಂಗಳೂರು
ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಹಳೇ ಕಳ್ಳನನ್ನು ಸೂರ್ಯನಗರ ಪೆÇಲೀಸರು ಬಂಧಿಸಿ 20 ಲಕ್ಷ ಮೌಲ್ಯದ ಕಾರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದ ಕೊಟ್ಟಂಪಲ್ಲಿಯ ಉಮಾಶಂಕರ್ (31) ಬಂಧಿತ ಹಳೇ ಕಳ್ಳನಾಗಿದ್ದಾನೆ. ಬಂಧಿತನಿಂದ 20 ಲಕ್ಷ ಮೌಲ್ಯದ 315 ಗ್ರಾಂ ಚಿನ್ನಾಭರಣ, ಸುಜುಕಿ ಎಸ್‍ಕ್ರಾಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್‍ಪಿ ಡಾ. ರಾಮ್‍ನಿವಾಸ್ ತಿಳಿಸಿದ್ದಾರೆ.
ಆರೋಪಿಯು ಮನೆಗಳವು ಪ್ರಕರಣದಲ್ಲಿ ಜೈಲಿಗೆ ಹೋಗಿ 2 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದು, ಐಷಾರಾಮಿ ಜೀವನಕ್ಕಾಗಿ ಮತ್ತೆ ಕಳ್ಳತನಕ್ಕಿಳಿದಿದ್ದ. ತಿರುಮಗೊಂಡನಹಳ್ಳಿಯ ಉಪ್ಕಾರ್ ಲೇಔಟ್‍ನ ಒಂಟಿ ಮನೆಯ ಮುಂಭಾಗ ನಿಲ್ಲಿಸಿದ್ದ ರಾಮಚಂದ್ರರೆಡ್ಡಿ ಎಂಬುವರ ಸುಜುಕಿ ಎ ಕ್ರಾಸ್ ಕಾರು ಕಳವು ಮಾಡಿದ್ದ ಪ್ರಕರಣ ದಾಖಲಿಸಿಕೊಂಡ ಸೂರ್ಯನಗರ ಪೊಲೀಸರು ಖಚಿತ ಮಾಹಿತಿಯಾಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನದಿಂದ 4 ಮನೆಗಳವು ಪ್ರಕರಣಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.
ಹೋಟೆಲ್ ಉದ್ಯೋಗಿ ಸಾವು
ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಹೋಟೆಲ್ ಉದ್ಯೋಗಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ವಿವಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಯ್ಯ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಹಲಸೂರಿನ ಮದಿ ಅಳಗನ್ (51) ಮೃತಪಟ್ಟವರು. ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಳಗನ್, ರಾತ್ರಿ 10ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಸಿದ್ದಯ್ಯ ರಸ್ತೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ಹೋಗುತ್ತಿದ್ದರು.
ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ವಿವಿಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








