ಹಿರಿಯೂರು :
ತಾಲ್ಲೂಕಿನ ಕೂಡ್ಲಹಳ್ಳಿಯ ಸಂಗಮೇಶ್ವರ ದೇವಸ್ಥಾನದ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್ಡ್ಯಾಂ ಒಂದೇರಾತ್ರಿ ಸುರಿದ ಮಳೆಗೆ ಭರ್ತಿಯಾಗಿದ್ದು, ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಬಂದು ಹೋಗುತ್ತಿದ್ದಾರೆ.
ಸುಮಾರು 200 ಮೀಟರ್ ಉದ್ದ, 3 ಮೀಟರ್ ಎತ್ತರದ ಅಂದಾಜು ರೂ. 6ಕೋಟಿ ವೆಚ್ಚದಲ್ಲಿ ಈ ಚೆಕ್ಡ್ಯಾಂ ನಿರ್ಮಿಸಲಾಗಿದ್ದು, ಇದು ತುಂಬಿದರೆ ಸುತ್ತಮುತ್ತಲಿನ ಆರೇಳು ಹಳ್ಳಿಗಳ ಅಂತರ್ಜಲ ವೃದ್ದಿಯಾಗುತ್ತದೆ ಎನ್ನಲಾಗಿದೆ.
ಈ ಚೆಕ್ಡ್ಯಾಂ ತುಂಬಿರುವ ಬಗ್ಗೆ ತೀವ್ರ ಸಂತಸ ವ್ಯಕ್ತಪಡಿಸಿರುವ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಗ್ರಾಮೀಣ ಭಾಗದಲ್ಲಿ ಸ್ವಲ್ಪಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂಬುದಾಗಿ ತಿಳಿಸಿದರು.
ತಾಲ್ಲೂಕಿನಲ್ಲಿ ಉತ್ತಮಮಳೆ : ಹಿರಿಯೂರು ನಗರ ಸೇರಿ ತಾಲ್ಲೂಕಿನ ಐಮಂಗಲ, ಕೋಡಿಹಳ್ಳಿ, ಮಾದ್ಯನಹೊಳೆ, ವೇಣುಕಲ್ಲುಗುಡ್ಡ ಮೊದಲಾದ ಕಡೆ ಆನುವಾರ ರಾತ್ರಿ ಹದ ಮಳೆಯಾಗಿದೆ. ಇಕ್ಕನೂರಿನಲ್ಲಿ 20.2 ಮಿ.ಮೀ, ಬಬ್ಬೂರಿನಲ್ಲಿ 17.4 ಮಿ.ಮೀ, ಹಿರಿಯೂರಿನಲ್ಲಿ 16.2 ಮಿ.ಮೀ, ಈಶ್ವರಗೆರೆಯಲ್ಲಿ 11.8 ಮಿ.ಮೀ, ಮಳೆಯಾಗಿದೆ.