ಜೈಪುರ :
ಎಐಸಿಸಿ ಅಧ್ಯಕ್ಷ ಹಾಗು ವಯನಾಡು ಕ್ಷೇತ್ರದ ಸಂಸದರೂ ಆಗಿರುವ ರಾಹುಲ್ ಗಾಂಧಿಯವರು ಏನಾದರು ರಾಜಿನಾಮೆ ನೀಡಿದರೆ ರಾಜಸ್ಥಾನ ಉಪ ಮುಖ್ಯಮಂತ್ರಿಯಾಗಿರುವ ಸಚಿನ್ ಪೈಲಟ್ ಅವರು ತಮ್ಮ ಶಾಸಕರ ತಂಡದೊಂದಿಗೆ ಕಾಂಗ್ರೆಸ್ ತೊರೆಯುಲು ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.
2014ರಲ್ಲಿ ಸಚಿನ್ ಪೈಲಟ್ ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗುವಲ್ಲಿ ರಾಹುಲ್ ಗಾಂಧಿ ಕಾರಣರಾಗಿದ್ದರು. ಕಳೆದ ವರ್ಷದ ವಿಧಾನಸಭೆ ಚುನಾವಣೆಯ ಬಳಿಕ ಪೈಲಟ್ ಅವರನ್ನು ಅಶೋಕ್ ಗೆಹಲೋಟ್ ಅವರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಗಿತ್ತು.
ಈಗ ಕಾಂಗ್ರೆಸ್ ಅಧ್ಯಕ್ಷರಾದ ಸಚಿನ್ ಪೈಲಟ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಅವರ ಮುಂದಿನ ಹೆಜ್ಜೆ ರಾಜಕೀಯದಲ್ಲಿ ಅನಿಶ್ಚಿತತೆಯ ವಾತಾವರಣ ಉಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಎದ್ದಿರುವ ಉಹಾಪೋಹಗಳ ಪ್ರಕಾರ ರಾಹುಲ್ ರಾಜಿನಾಮೆ ನೀಡಿದರೆ ರಾಜಾಸ್ಥಾನದಲ್ಲಿ ಸಚಿನ್ ಪೈಲಟ್ ಸ್ಥಾನಕ್ಕೆ ಕುತ್ತು ಬರಲಿದೆ. ಈ ಎಲ್ಲಾ ಬೆಳವಣಿಗೆ ಗಮನಿಸಿರುವ ಸಚಿನ್ ಅವರು ತನ್ನ ಶಾಸಕರ ತಂಡದೊಂದಿಗೆ ಕಾಂಗ್ರೆಸ್ ತೊರೆದು, ಪಕ್ಷೇತರರು ಮತ್ತು ಕೆಲವು ಬಿಜೆಪಿ ಶಾಸಕರ ಬೆಂಬಲದೊಂದಿಗೆ ರಾಜಸ್ಥಾನದಲ್ಲಿ ಹೊಸ ಸರಕಾರ ರಚಿಸುವ ದಾವಾ ಮಂಡಿಸಲಿದ್ದಾರೆ ಎಂಬ ಊಹಾಪೋಹ ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.
200 ಸದಸ್ಯ ಬಲ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 100 ಸದಸ್ಯರನ್ನು ಹೊಂದಿದೆ. ಉಳಿದಂತೆ ಬಿಜೆಪಿ 73, ಬಿಎಸ್‌ಪಿ 6, ಆರ್‌ಎಲ್‌ಪಿ 3, ಸಿಪಿಎಂ 2, ಬಿಟಿಪಿ 2 ಮತ್ತು ಆರ್‌ಎಲ್‌ಡಿ 1 ಹಾಗೂ 13 ಪಕ್ಷೇತರ ಸದಸ್ಯರು ಇದ್ದಾರೆ.
ಪ್ರಸ್ತುತ ಗೆಹಲೋಟ್ ಸರಕಾರಕ್ಕೆ 6 ಬಿಎಸ್‌ಪಿ ಶಾಸಕರು ಮತ್ತು 12 ಪಕ್ಷೇತರರ ಬೆಂಬಲವಿದೆ. ಹಾಗಿದ್ದರೂ ಅದೀಗ ಸಂಕಷ್ಟದಲ್ಲಿದೆ.ಕಳೆದ ಸೋಮವಾರ ಬಿಎಸ್‌ಪಿ ಶಾಸಕರು ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರನ್ನು ಭೇಟಿಯಾಗುವವರಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರ ಭೇಟಿ ರದ್ದಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








