ಬೆಂಗಳೂರು
ಶಿಕ್ಷಕನಾಗಿದ್ದ ಖಾಸಗಿ ಶಾಲೆಯನ್ನು ಬಿಟ್ಟು ತಾನೇ ಶಾಲೆ ಆರಂಭಿಸಿ ಹಳೆಯ ಶಾಲೆಯ ವಿದ್ಯಾರ್ಥಿಗಳನ್ನು ತನ್ನ ಶಾಲೆಗೆ ದಾಖಲಿಸಿಕೊಳ್ಳುತ್ತಿದ್ದ ದ್ವೇಷದ ಮೇಲೆ ಸುಫಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣವನ್ನು ಬೇಧಿಸಿರುವ ದೊಡ್ಡಬಳ್ಳಾಪುರ ಪೊಲೀಸರು 6 ಮಂದಿ ಸುಪಾರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಬ್ಬಿಗೆರೆಯ ಶ್ರೀನಿವಾಸಮೂರ್ತಿ (37), ನಾಗೇಶ್ ಕುಮಾರ್ ಅಲಿಯಾಸ್ ಕಪ್ಪೆ (24), ನೆಲಮಂಗಲದ ಭಕ್ತನ ಪಾಳ್ಯದ ವೆಂಕಟೇಶ್ (29), ಹೆಗ್ಗಡದೇವನಪುರದ ಯೋಗೇಶ್ ಅಲಿಯಾಸ್ ಯೋಗಿ (27), ಮಾಗಡಿಯ ಆದರ್ಶ ಅಲಿಯಾಸ್ ಆದಿ (20) ಹಾಗೂ ಸುಮನಹಳ್ಳಿಯ ವೀರಭದ್ರ ಅಲಿಯಾಸ್ ವೀರರಾಜು (29) ಬಂಧಿತ ಸುಫಾರಿ ಹಂತಕರಾಗಿದ್ದಾರೆ.
ಆರೋಪಿಗಳಿಗೆ 15 ಲಕ್ಷ ಸುಪಾರಿ ನೀಡಿದ್ದ ಹೆಸರುಘಟ್ಟದ ತಮ್ಮೇನಹಳ್ಳಿಯ ಆರ್ಸಿ ಇಂಟರ್ ನ್ಯಾಷನಲ್ ಸ್ಕೂಲ್ನ ಮಾಲೀಕ ರಾಮಚಂದ್ರರೆಡ್ಡಿ ಹಾಗೂ ಮತ್ತೊಬ್ಬ ಆರೋಪಿ ಮೋಹನ್ ತಲೆಮರೆಸಿಕೊಂಡಿದ್ದು, ಅವರಿಬ್ಬರ ಬಂಧನಕ್ಕೆ ವಿಶೇಷ ತಂಡ ರಚಿಸಿ ತೀವ್ರ ಶೋಧ ನಡೆಸಲಾಗಿದೆ.
ಕೃತ್ಯದ ವಿವರ
ಹೆಸರುಘಟ್ಟದ ಎಚ್ಎಸ್ಎಲ್ಎನ್ ಸ್ಕೂಲ್ನ ಕಾರ್ಯದರ್ಶಿ ನಾಗೇಶ್ವರರಾವ್ ಅವರು ಕಳೆದ ಮೇ 16 ರಂದು ಬೆಳಿಗ್ಗೆ 8.30ರ ವೇಳೆ ಮಧುರೆ ರಾಜಾನುಕುಂಟೆ ರಸ್ತೆಯ ಕುಂಬಳಗುಂಟೆ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದರು.ಕೆಳಗಿಳಿದ ನಾಗೇಶ್ವರರಾವ್ ಅವರ ಮೇಲೆ ಹೊಟ್ಟೆ, ಕುತ್ತಿಗೆ, ತಲೆ ಇನ್ನಿತರ ಭಾಗಗಳಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಯತ್ನ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಾಗೇಶ್ವರರಾವ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದ ರಾವ್ ಅವರು ಪ್ರಾಣಾಪಾಯದಿಂದ ಪಾರಾಗಿ ದೊಡ್ಡಬೆಳವಂಗಲ ಪೆÇಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡಬಳ್ಳಾಪುರ ವೃತ್ತದ ಡಿವೈಎಸ್ಪಿ ಮೋಹನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು ನೇತೃತ್ವದಲ್ಲಿ ದೊಡ್ಡಬೆಳವಂಗಲ ಪೆÇಲೀಸರೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ. ರಾಮನಿವಾಸ್ ಸೆಪಟ್ ತಿಳಿಸಿದ್ದಾರೆ.
15 ಲಕ್ಷ ಸುಫಾರಿ
ವಿಚಾರಣೆ ವೇಳೆ ಆರೋಪಿಗಳು ತಮ್ಮೇನಹಳ್ಳಿಯ ಆರ್ಸಿ ಇಂಟರ್ ನ್ಯಾಷನಲ್ ಸ್ಕೂಲಿನ ಮಾಲೀಕ ರಾಮಚಂದ್ರರೆಡ್ಡಿ ಅವರಿಂದ 15 ಲಕ್ಷ ಸುಪಾರಿ ಪಡೆದು ಈ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ.
ತನಿಖೆಯಲ್ಲಿ ರಾಮಚಂದ್ರರೆಡ್ಡಿಯ ಸ್ಕೂಲಿನಲ್ಲಿ ಹಿಂದೆ ನಾಗೇಶ್ವರರಾವ್ ಉಪಾಧ್ಯಾಯರಾಗಿ ಕೆಲೆಸ ಮಾಡುತ್ತಿದ್ದರು. 1 ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ಅವರು, ಹೆಸರುಘಟ್ಟ ಹಾಗೂ ಗೌರಿಬಿದನೂರಿನಲ್ಲಿ ಎಚ್ಎಸ್ಎಲ್ ಎನ್ ಸ್ಕೂಲ್ಗಳನ್ನು ಆರಂಭಿಸಿ ಆರ್ಸಿ ಇಂಟರ್ ನ್ಯಾಷನಲ್ಗೆ ಬರುತ್ತಿದ್ದ ವಿದ್ಯಾರ್ಥಿಗಳ ಪೋಷಕರಿಗೆ ತಮ್ಮದೇ ಶಾಲೆ ಸೇರಿಸುವಂತೆ ಪ್ರೇರೇಪಿಸುತ್ತಿದ್ದರು.
ಇದನ್ನು ತಿಳಿದ ರಾಮಚಂದ್ರರೆಡ್ಡಿ, ಆಕ್ರೋಶಗೊಂಡು ನಾಗೇಶ್ವರರಾವ್ ಕೊಲೆಗೆ ಸಂಚು ರೂಪಿಸಿ 15 ಲಕ್ಷ ಸುಪಾರಿ ನೀಡಿರುವುದು ಪತ್ತೆಯಾಗಿದೆ.
ಸುಪಾರಿ ನೀಡಿದ್ದ ರಾಮಚಂದ್ರರೆಡ್ಡಿ ಹಾಗೂ ಆತನ ಜತೆಗೆ ಕೃತ್ಯದಲ್ಲಿ ಪಾಲ್ಗೊಂಡಿದ್ದ ಮೋಹನ್, ತಲೆಮರೆಸಿ ಕೊಂಡಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗಿದೆ. ಸುಪಾರಿ ಕೊಲೆಯತ್ನ ಕೃತ್ಯವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ತಂಡವನ್ನು ಕೇದ್ರ ವಲಯ ಐಜಿಪಿ ಶರತ್ಚಂದ್ರ ಅವರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








