ಹುಳಿಯಾರು:
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ರಂಗಭೂಮಿಗೆ ಈ ಹಿಂದೆ ಕೊಡುತ್ತಿದ್ದ ಅನುಧಾನದ ಪ್ರಮಾಣದಲ್ಲಿ ಕಡಿತ ಮಾಡಿವೆ ಎಂದು ರಂಗಪಂಚಮಿಯ ಸಂಸ್ಥಾಪಕ ಕಾರ್ಯದರ್ಶಿ ನಂಜುಂಡಸ್ವಾಮಿ ತೊಟ್ಟವಾಡಿ ಆರೋಪಿಸಿದರು.
ಹುಳಿಯಾರಿನ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಬೆಂಗಳೂರಿನ ರಂಗಪಂಚಮಿಯಿಂದ ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್, ತಂಜಾವೂರು ದಕ್ಷಿಣ ವಲಯ ಸಾಂಸ್ಕತಿಕ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಿದ್ದ ಜನಪರ ಸಂಸ್ಕೃತಿ ಉತ್ಸವ-2019 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರಂಗಭೂಮಿಗೆ ಕೊಡುತ್ತಿದ್ದ ಅನುದಾನದಲ್ಲಿ ಈ ವರ್ಷ ಶೇ.70 ರಷ್ಟು ಕಡಿತ ಮಾಡಿದೆ. ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕತಿ ಇಲಾಖೆಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಪರಿಣಾಮ ಕಾಲಕಾಲಕ್ಕೆ ಕಲಾವಿದರ ಮಾಸಾಶನ ಸಿಗುತ್ತಿಲ್ಲ. ಮೊದಲಿನಂತೆ ರಂಗ ಚಟುವಟಿಕೆಗಳು ನಡೆಯದೆ ವೃತ್ತಿ ಕಲಾವಿದರ ಜೀವನ ನಿರ್ವಹಣೆ ಕಷ್ಟವಾಗಿದೆ. ಅಲ್ಲದೆ ಯುವ ಜನತೆ ರಂಗಚಟುವಟಿಕೆಯತ್ತ ಆಕರ್ಷಿತವಾಗದೆ ರಾಜ್ಯ ಮತ್ತು ದೇಶದ ಕಲೆ ಸಂಸ್ಕತಿ ಅವತಿಯತ್ತ ಸಾಗಿದೆ ಎಂದು ಅಳಲು ತೋಡಿಕೊಂಡರು
ಹಿಂದೆ ರಾಜಾಶ್ರಯದಲ್ಲಿ ಕಲೆ, ಸಂಸ್ಕತಿ, ಸಾಹಿತ್ಯ ಗುರುತಿಸಿ, ಪೋಷಿಸಿ, ಬೆಳೆಯುತ್ತಿತ್ತು. ಅದರಂತೆ ಈಗ ಮಠಮಾನ್ಯರ ಆಶ್ರಯದಲ್ಲಿ ಬೆಳೆಯುತ್ತಿದೆ. ಇದಕ್ಕೆ ಸಾಣೇಹಳ್ಳಿ ಮಠ, ಚಿತ್ರದುರ್ಗ ಮಠ ಸೇರಿದಂತೆ ಅನೇಕ ಮಠಗಳು ನಿದರ್ಶನವಾಗಿವೆ. ಕೆಲ ಹಳ್ಳಿಗಳಲ್ಲಿ ರಂಗಾಸಕ್ತರ ಸಹಕಾರದಿಂದ ಕಲೆಗಳು, ಕಲಾವಿದರು ಬೆಳೆಯುತ್ತಿವೆ. ಈ ಪಟ್ಟಿಯಲ್ಲಿ ಹುಳಿಯಾರಿನ ಮಾತಾ ಟ್ರಸ್ಟ್ನ ಗಂಗಾಧರ್ ಕೊಡ ಒಬ್ಬರಾಗಿದ್ದಾರೆ ಎಂದು ಪ್ರಶಂಸಿದರು.
ಚಿತ್ರದುರ್ಗ ಮುರುಘ ರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಶರಣರು ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಎಚ್.ಆರ್.ಸ್ವಾಮಿ ಉದ್ಘಾಟಿಸಿದರು. ಶ್ರೀಮಾತಾ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ತಂಜಾವೂರು ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಜಗನ್ನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.