ಶಾಸಕರಿಂದ ಬಿತ್ತನೆ ಬೀಜ ವಿತರಣೆ..!!

ಹಾನಗಲ್ಲ :

    ಗುಣಮಟ್ಟದ ಬಿತ್ತನೆ ಬೀಜ ವಿತರಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಕೃಷಿ ಇಲಾಖೆ ಕಾಳಜಿವಹಿಸಬೇಕು ;ಎಂದು ಶಾಸಕ ಸಿ.ಎಂ.ಉದಾಸಿ ಕಟ್ಟುನಿಟ್ಟಿನ ಆದೇಶ ಮಾಡಿದರು.

     ಸೋಮವಾರ ಹಾನಗಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ ಪ್ರಸ್ತುತ ವರ್ಷದ ರಿಯಾಯತಿ ದರದ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಮಳೆ ಬೆಳೆ, ಬೆಳೆಗೆ ಉತ್ತಮ ಬೆಲೆ ಬಂದರೆ ಮಾತ್ರ ರೈತ ಆರ್ಥಿಕವಾಗಿ ಸಬಲನಾಗಬಲ್ಲ. ಕೃಷಿ ಇಲಾಖೆ ಗುಣಮಟ್ಟಣದ ಬೀಜಗಳನ್ನು ರೈತರಿಗೆ ವಿತರಿಸಬೇಕು. ಸಂಸ್ಕರಣಗೊಂಡ ಬೀಜಗಳನ್ನೇ ರೈತರಿಗೆ ವಿತರಿಸಬೇಕು. ತಾಲೂಕಿನ 9 ಕೇಂದ್ರಗಳಲ್ಲಿ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆಯಾಗಬೇಕು ಎಂದು ತಿಳಿಸಿದರು.

     ಬೆಳೆವಿಮೆ ವಿಷಯದಲ್ಲಿ ರೈತರು ನಿರ್ಲಕ್ಷ ತೋರಬಾರದು. ಎಲ್ಲ ರೈತರು ಬೆಳೆವಿಮೆ ಕಟ್ಟಬೇಕು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಇದು ರೈತರಿಗೆ ಸಹಕಾರಿಯಾಗುತ್ತದೆ. ಕಳೆದ ವರ್ಷ ಸೈನಿಕ ಹುಳದ ಬಾಧೆಯಿಂದ ಗೋವಿನ ಜೋಳದ ಬೆಳೆ ಹಾನಿಯಾಯಿತು. ಆದರೆ ಹೊರದೇಶಗಳಿಂದ ಆಯಾತ ಬಂದ ಮಾಡಿದ್ದರಿಂದ ಈ ಬಾರಿ ಗೋವಿನಜೋಳಕ್ಕೆ ಉತ್ತಮ ಬೆಲೆ ಬಂದಿದೆ. ಪ್ರಸ್ತುತ ವರ್ಷ ಅಡಿಕೆ, ಹಸಿ ಮೆಣಸಿನಕಾಯಿ ಫಸಲಿಗೂ ಬೆಳೆವಿಮೆ ಕಟ್ಟಲು ರೈತರು ಮರೆಯಬೇಡಿ. ಮಾವು ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಪದ್ಧತಿ ಇದೆ. ಬೆಳೆ ವಿಮೆ ನಿರ್ಧಾರಕ್ಕೆ ತನ್ನದೇ ಆದ ನಿಯಮಗಳಿವೆ. ಕಳೆದ ವರ್ಷದ ಬೆಳೆ ವಿಮೆ ಪ್ರಮಾಣ ಇನ್ನೂ ಪ್ರಕಟವಾಗಿಲ್ಲ. ಜೂನ ಅಂತ್ಯದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದ ಶಾಸಕ ಸಿ.ಎಂ.ಉದಾಸಿ ಬಿತ್ತನೆ ಬೀಜ ವಿತರಣೆ ವಿಷಯದಲ್ಲಿ ಅವ್ಯವಸ್ಥೆಯಾಗಕೂಡದು ಎಂದು ಎಚ್ಚರಿಸಿದರು.

     ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶೇಖಣ್ಣ ಮಹರಾಜಪೇಟ ಮಾತನಾಡಿ, ರೈತರು ಬಹುತೇಕ ಮಳೆ ಆಧಾರಿತ ಕೃಷಿ ಹೊಂದಿರುವುದರಿಂದ ಇಡೀ ವರ್ಷ ಆತಂಕದಲ್ಲಿಯೇ ಇರಬೇಕಾಗಿದೆ. ಆದಾಗ್ಯೂ ರೈತ ಸಮುದಾಯ ಸಕಾಲಿಕವಾಗಿ ಔಷದೋಪಚಾರದ ಮೂಲಕ ತಮ್ಮ ಬೆಳೆಯನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ. ಸರಕಾರ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಬಸಣ್ಣ ಎಲಿ, ತಾಪಂ ಸದಸ್ಯ ಬಸವರಾಜ ಬೂದಿಹಾಳ, ರಾಜಣ್ಣ ಪಟ್ಟಣದ, ನಾಗಪ್ಪ ಶಿವಣ್ಣನವರ, ಬಿ.ಸಿ.ಪರಮಶೆಟ್ಟಿ, ಮಹಾಲಿಂಗಪ್ಪ ಅಕ್ಕಿವಳ್ಳಿ, ಸಿದ್ದನಗೌಡ ಪಾಟೀಲ, ಕೃಷಿ ಇಲಾಖೆ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ಮಹಾಲಿಂಗಪ್ಪ ಬಿದರಮಳ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link