ಚಿತ್ರದುರ್ಗ
ದೇಶದ ಪ್ರಗತಿಯಲ್ಲಿ ವಿವಿಧ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಿದ್ದು ಅಂಚೆ ಇಲಾಖೆಯ ನೌಕರರು ಪ್ರಮಾಣಿಕತೆ ಮತ್ತು ಬದ್ದತೆಯಿಂದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಅಂಚೆ ಇಲಾಖೆ, ನೌಕರರ ವಾರ್ಷಿಕ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದಲೂ ಇಂತಹ ಸಮಾವೇಶಗಳಲ್ಲಿ ಭಾಗವಹಿಸುವುದರ ಮೂಲಕ ಅವರಲ್ಲಿ ಒಬ್ಬನಾಗಿದ್ದೇನೆ, ನಿಮ್ಮ ಸಮಸ್ಯೆಗಳು ಇನ್ನು ನಿರಂತರವಾಗಿ ಇದೆ. ಈ ಹಿಂದೆ ಕಾರ್ಮಿಕ ಸಂಘಟನೆಗಳು ಬಲಿಷ್ಠವಾಗಿದ್ದು, ಅದರಲ್ಲಿ ನಾಯಕರಾದವರು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಸದಸ್ಯರಾಗುವುದರ ಮೂಲಕ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವುದರ ಮೂಲಕ ಸರ್ಕಾರದಿಂದ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು
ಆದರೆ ಇಂದಿನ ದಿನಮಾನದಲ್ಲಿ ಕಾರ್ಮಿಕ ಸಂಘಟನೆಗಳ ಶಕ್ತಿ ಕಡಿಮೆಯಾಗಿ ನಿಮ್ಮ ಪರವಾಗಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಾತನಾಡುವವರು ಇಲ್ಲವಾಗಿದೆ ಎಂದು ವಿಷಾಧಿಸಿದರು.ಒಂದು ಕಾಲದಲ್ಲಿ ಅಂಚೆ ಇಲಾಖೆ ಎಂದರೆ ಉತ್ತಮವಾದ ಹೆಸರನ್ನು ಪಡೆಯಲಾಗಿತ್ತು, ಅದರಿಂದ ಸೇವೆಯನ್ನು ಪಡೆಯಲು ಹರಸಾಹಸ ಮಾಡಬೇಕಾದ ಕಾಲ ಇತ್ತು, ಇಲ್ಲಿನ ಸಿಬ್ಬಂದಿಗಳು ಸಹಾ ಹರಸಾಹಸ ಮಾಡುವುದರ ಮೂಲಕ ಮನೆ-ಮನೆಗೆ ಅಂಚೆಯನ್ನು ತಲುಪಿಸುವುದರ ಮೂಲಕ ಕಷ್ಟಪಡುತ್ತಿದ್ದಾರೆ. ಆದರೆ ಇವರಿಗೆ ಸಿಗುವ ವೇತನ ಮಾತ್ರ ಕಡಿಮೆ ಇದೆ. ಇದರ ಬಗ್ಗೆ ಸಂಬಂಧಪಟ್ಟವರ ಜೊತೆಯಲ್ಲಿ ಮಾತನಾಡುವುದರ ಮೂಲಕ ನಿಮ್ಮ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ತಿಪ್ಪಾರೆಡ್ಡಿ ಭರವಸೆ ನೀಡಿದರು.
ಅಂಚೆ ಇಲಾಖೆ ಹಿಂದಿನಿಂದಲೂ ಸಹಾ ಪ್ರಮಾಣಿಕ ಇಲಾಖೆ ಎಂದು ಹೆಸರು ಮಾಡಿದೆ, ಇಂದಿಗೂ ಸಹಾ ಸರ್ಕಾರದ ಹಲವಾರು ಯೋಜನೆಗಳು ಅಂಚೆ ಇಲಾಖೆವತಿಯಿಂದಲೇ ಅನುಷ್ಠಾನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಇಲಾಖೆಗಳಾದ ಬಿ.ಎಸ್.ಎನ್.ಎಲ್ ಈ ಹಿಂದೆ ಅದರಲ್ಲಿನ ಸಿಬ್ಬಂದಿಗಳ ಅಪ್ರಮಾಣಿಕತೆಯಿಂದಾಗಿ ಪ್ರಗತಿ ಕುಂಠಿತವಾಗಿದೆ, ಅದರೆ ಅಂಚೆ ಇಲಾಖೆ ಮಾತ್ರ ತನ್ನ ಪಾಲಿನ ಕೆಲಸವನ್ನು ಮಾಡುತ್ತಿದೆ ಎಂದು ಅಂಚೆ ಇಲಾಖೆಯ ನೌಕರರ ಕಾರ್ಯಕ್ಷಮತೆಯನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘದ ಅಧ್ಯಕ್ಷ ರಂಗೇಶ್, ಅಂಚೆ ಅಧೀಕ್ಷಕರಾದ ಶಿವರಾಜ್ ಜಂಡೆಮಠ್, ಮಾಜಿ ಅಧ್ಯಕ್ಷ ಮಲ್ಲಿಕಾರ್ಜನಪ್ಪ, ಕಾರ್ಯದರ್ಶಿ ಮಹದೇವ್, ಮಂಜುನಾಥ್, ಚಿತ್ರಸೇನ ಲಿಂಗಾನಾಯ್ಕ್, ತಿಮ್ಮಾರೆಡ್ಡಿ, ಉಮೇಶ್ ಸೇರಿದಂತೆ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ನಿವೃತ್ತರಾದ ನೌಕರರು ಮತ್ತು 2017-18 ಮತ್ತು 2018-19ನೇ ಸಾಲಿನಲ್ಲಿ ಇಲಾಖೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








