ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಶೇ.72.22 ಮತದಾನವಾಗಿದ್ದು, ಭಾರತೀಯ ಜನತಾ ಪಕ್ಷಕ್ಕೆ ಉತ್ತಮ ಮತಗಳು ದೊರಕಿದ್ದು, ಈ ಬಗ್ಗೆ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಅಧ್ಯಕ್ಷತೆಯಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಚಿಂತನ ಮಂಥನ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಬಿ.ವಿ.ಸಿರಿಯಣ್ಣ, ಕಳೆದ 2014ರ ಲೋಕಸಭಾ ಚುನಾವಣೆಗಿಂತ 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸುವ ಎಲ್ಲಾ ಸೂಚನೆಗಳು ಕಂಡು ಬಂದಿವೆ. ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಗ್ರಾಮಗಳಲ್ಲಿ ನಿಗದಿ ಪಡಿಸಿದ ಬೂತ್‍ಗಳಲ್ಲಿ ಕಾರ್ಯನಿರ್ವಹಿಸಿ ಎಲ್ಲೆಡೆ ಪಕ್ಷಕ್ಕೆ ಹೆಚ್ಚು ಮತಗಳು ಲಭ್ಯವಾಗುವಂತೆ ಕಾರ್ಯನಿರ್ವಹಿಸಿದ್ಧಾರೆ. ಎಲ್ಲಾ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದು, ಈ ಬಾರಿಯ ಚುನಾವಣಾ ಗೆಲುವಿಗೆ ಮೋದಿಯವರ ನಾಮಬಲವೆ ಪ್ರಮುಖ ಕಾರಣವಾಗಲಿದೆ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿಯಾಗಿ ಎ.ನಾರಾಯಣಸ್ವಾಮಿ ಸಹ ಕ್ಷೇತ್ರಕ್ಕೆ ಎರಡು ಬಾರಿ ಭೇಟಿ ನೀಡಿ ಗೆಲುವಿನ ಬಗ್ಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದರು. ವಿಶೇಷವಾಗಿ ಏ.9ರಂದು ನಡೆದ ಪ್ರಧಾನ ಮಂತ್ರಿಯವರ ವಿಜಯ ಸಂಕಲ್ಪಯಾತ್ರೆ ಭಾರತೀಯ ಜನತಾ ಪಕ್ಷದ ಗೆಲುವವನ್ನು ದೃಢಪಡಿಸಿತ್ತು. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಗೆಲುವು ಸಾಧಿಸಲಿದ್ದು, ಪಕ್ಷದ ವಿಜಯಕ್ಕಾಗಿ ಕಾರ್ಯನಿರ್ವಹಿಸಿ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ಬಿ.ವಿ.ಸಿರಿಯಣ್ಣ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಬಲವರ್ಧನೆ ಮತ್ತು ಸಂಘಟನೆಗೆ ಪಕ್ಷದ ನಿರ್ದೇಶನದಂತೆ ಕಾರ್ಯನಿರ್ವಹಿಸಿದ ಸಂತೋಷ್ ಭಟ್ಕಳ್‍ರವರು ಮತದಾನ ಮುಗಿದ ಹಿನ್ನೆಲೆಯಲ್ಲಿ ವಾಪಾಸ್ ತೆರಳುತ್ತಿದ್ದು ಅವರನ್ನು ಪಕ್ಷದ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಭಟ್ಕಳ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆಯಲ್ಲಿ ಅನೇಕ ಹಿರಿಯರು ಹಾಗೂ ಅನುಭವವುಳ್ಳ ಕಾರ್ಯಕರ್ತರು ಪಡೆ ಇದ್ದು ಪಕ್ಷವನ್ನು ಮುನ್ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಯಾವ ವ್ಯಕ್ತಿ ಪಕ್ಷದ ಉನ್ನತ್ತಿಗಾಗಿ ಶ್ರಮಿಸುತ್ತಾನೋ ಅ ವ್ಯಕ್ತಿ ಪಕ್ಷದ ಆಸ್ತಿಯಾಗಿ ಉಳಿಯುತ್ತಾನೆ. ಬಿಜೆಪಿ ಇಂದು ತನ್ನದೇಯಾದ ತತ್ವ ಸಿದ್ದಾಂತಗಳ ಮೇಲೆ ಎಲ್ಲರಲ್ಲೂ ಬಲವಾಗಿ ನೆಲೆಯೂರಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಂ.ಎಸ್.ಜಯರಾಮ್, ಟಿ.ಬೋರನಾಯಕ, ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮಹಿಳಾ ಘಟಕದ ಅದ್ಯಕ್ಷೆ ಜಗದಾಂಭ, ಹೊಟ್ಟೆಪ್ಪನಹಳ್ಳಿ ಮಂಜುನಾಥ, ಕಾಟ್ಟಪ್ಪನಹಟ್ಟಿ ವೀರೇಶ್, ಇ.ಎನ್.ವೆಂಕಟೇಶ್, ಜಿ.ಕೆ.ವೀರಣ್ಣ, ಚಿದಾನಂದ, ಎಸ್.ಯಲ್ಲಪ್ಪ, ದಿನೇಶ್‍ರೆಡ್ಡಿ, ಎ.ವಿಜಯೇಂದ್ರ, ಡಿ.ಕೆ.ಸೋಮಶೇಖರ ಮುಂತಾದವರು ಭಾಗವಹಿಸಿದ್ದರು.