ಬ್ಯಾಡಗಿ:
ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆ, ವೈಜ್ಞಾನಿಕ ಕಸ ವಿಲೇವಾರಿ ವ್ಯವಸ್ಥೆಯ ಜೊತೆಗೆ ನೀರು ಪೋಲಾಗುವುದನ್ನು ತಡೆದು ಜಲ ಮೂಲಗಳ ರಕ್ಷಣೆಗೆ ಜಾಗೃತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಾಗಿದ್ದು, ಹಳ್ಳಿಯ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಿ ಸ್ಫೂರ್ತಿ ತುಂಬುವುದು ಅಗತ್ಯವಾಗಿದೆ ಎಂದು ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಹೇಳಿದರು.
ಮಂಗಳವಾರ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ತಾಲೂಕಾ ಪಂಚಾಯತ ಹಾಗೂ ಗ್ರಾಮ ಪಂಚಾಯತ ಮಾಸಣಗಿ ಸಂಯುಕ್ತಾ ಶ್ರಯದಲ್ಲಿ ಜರುಗಿದ ಸತ್ಯಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮಗಳ ಉದ್ಘಾಟನೆಯನ್ನು ಸಸಿ ನೆಡುವ ಮೂಲಕ ನೆರವೇರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯ ಅರಿವಿನ ಕೊರತೆಯಿದ್ದು, ಗ್ರಾಮೀಣ ಸೌಂದರ್ಯಕ್ಕೆ ಅಲ್ಲಿರುವ ತಿಪ್ಪೆಗಳೇ ಮುಳುವಾಗಿವೆ.
ಸರಾಗವಾಗಿ ನೀರು ಹರಿಯುವ ರಸ್ತೆ ಬದಿಗಳ ಕಾಲುವೆಗಳಲ್ಲಿ ಕಸಹಾಕಿ ತಿಪ್ಪೆಮಾಡುವ ಪರಿಪಾಠ ಹೆಚ್ಚಾಗಿದೆ. ಇದರಿಂದ ಕಾಲುವೆಯಲ್ಲಿರುವ ತಿಪ್ಪೆಗಳ ಮೂಲಕ ನೀರು ಹರಿದು ಕೆರೆಗಳನ್ನು ಸೇರಿ ಜನ-ಜಾನುವಾರುಗಳು ಕುಡಿಯುವ ನೀರನ್ನು ಕಲುಷಿತ ಗೊಳಿಸುತ್ತಿವೆ. ಗ್ರಾಮದ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಯಲು ಗ್ರಾಮಗಳ ರಸ್ತೆ ಬದಿಯ ತಿಪ್ಪೆಗುಂಡಿಗಳನ್ನು ಸ್ಥಳಾಂತರಿಸುವ ಕುರಿತಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ತಹಶೀಲದಾರ ಕೆ.ಗುರುಬಸವರಾಜ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಯಥೇಚ್ಚವಾಗಿ ನೀರು ಪೋಲಾಗುವುದನ್ನು ತಡೆಯಬೇಕಾಗಿದೆ. ಈ ಕುರಿತಂತೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದ್ದು ಅವರ ಕರ್ತವ್ಯದ ಬಗ್ಗೆ ಎಚ್ಚರಿಸಬೇಕಾಗಿದೆ. ಅಲ್ಲದೇ ಜಲಮೂಲಗಳ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಮಾತನಾಡಿ, ಸರ್ಕಾರ ಜಲ ರಕ್ಷಣೆ ಹಾಗೂ ಪರಿಸರ ರಕ್ಷಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಸಾಕಷ್ಟು ಅನುದಾನ ಸಹ ನೀಡಿದೆ. ಪರಿಸರ ನಾಶದಿಂದ ದಿನದಿಂದ ದಿನಕ್ಕೆ ಅಮೃತಕ್ಕೆ ಸಮಾನವಾದ ನೀರಿನ ಅಭಾವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಲ ಮೂಲಗಳ ಪುನಶ್ಚೇತನ ಕೆಲಸಗಳು ಸಕಾಲಕ್ಕೆ ನಡೆಸಬೇಕಾಗಿದೆ ಎಂದರು.
ಗ್ರಾ.ಪಂ.ಸದಸ್ಯ ಶಿವಣ್ಣ ಕುಮ್ಮೂರ ಮಾತನಾಡಿ ಪ್ರತಿ ಗ್ರಾಮಗಳಲ್ಲೂ ಚೆಕ್ ಡ್ಯಾಂಗಳ ನಿರ್ಮಾಣ, ಕೆರೆಗಳ ಹೂಳೆತ್ತುವ ಕಾರ್ಯಕ್ರಮಗಳು ಆಂದೋಲನದ ರೀತಿಯಲ್ಲಿ ನಡೆಯಬೇಕಾಗಿದೆ. ಜಲ ರಕ್ಷಣೆ ಹಾಗೂ ಜಲಮೂಲಗಳ ಪುನಶ್ಚೇತನಕ್ಕೆ ನಿರುತ್ಸಾಹ ತೋರುವ ಅಧಿಕಾರಿಗಳಿಗೆ ಚಾಟಿ ಬೀಸಬೇಕು. ಉತ್ಸಾಹ ತೋರುವ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ ಓಲೇಕಾರ ವಹಿಸಿದ್ದರು, ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಗ್ರಾ.ಪಂ.ಉಪಾಧ್ಯಕ್ಷ ಬಸನಗೌಡ್ರ ಸಣ್ಣಗೌಡ್ರ, ಸದಸ್ಯರಾದ ಬಸಪ್ಪ ಬನ್ನಿಹಟ್ಟಿ, ಕುಬೇರಪ್ಪ ಕೊರ್ಲಿ, ಶೋಭಾ ಗಿಡ್ಡಣ್ಣನವರ, ಕಮಲವ್ವ ಗೌರಪ್ಪನವರ, ಮಂಗಳಾ ದೊಡ್ಡಮನಿ ವಿವಿಧ ಇಲಾಖೆಯ ಅಧಿಕಾರಿಗಳಾದ ಪುಂಡಲಿಕ ಮಾನವರೆ, ಎಚ್.ತಿಮ್ಮಾರೆಡ್ಡಿ, ಗೀತಾ ಕುಂದಾಪುರ, ಟಿ.ವಿಜಯಲಕ್ಷ್ಮಿ, ಕೆ.ಎಚ್.ಪೂಜಾರ, ಎಚ್.ಟಿ.ಲಮಾಣಿ, ಅಶೋಕ ಕೊಪ್ಪದ, ಟಿ.ನಟರಾಜ, ಯಲ್ಲಪ್ಪ ಮಟಗಾರ, ರಾಮಲಿಂಗಪ್ಪ ಸೇರಿದಂತೆ ಇನ್ನಿತರರಿದ್ದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಲ್ಲೇಶ ಮೋಟೆನವರ ಸ್ವಾಗತಿಸಿದರು. ಜೀವರಾಜ ಛತ್ರದ ನಿರೂಪಿಸಿದರು. ಎನ್.ಜಿ.ಅಮೃತೇಶ್ವರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/11-BYD-1.gif)