ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲ : ಸಿ.ಇ.ಓ

ತುಮಕೂರು

   ಎಷ್ಟೇ ಬೆಲೆ ತೆತ್ತರೂ, ಕೃತಕವಾಗಿ ತಯಾರಿಸಲಾಗದಿರುವ ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲವೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅಭಿಪ್ರಾಯಪಟ್ಟರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಹೆಚ್.ಐ.ವಿ. ಮತ್ತು ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಆಸ್ಪತ್ರೆ ಮತ್ತು ರಕ್ತನಿಧಿ ಕೇಂದ್ರ, ಜಿಲ್ಲಾ ಪೊಲೀಸ್ ಇಲಾಖೆ, ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಹಾಗೂ ಕಾರಾಗೃಹ ಇಲಾಖೆ ಪ್ರಶಿಕ್ಷಣಾರ್ಥಿಗಳ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      ಜಿಲ್ಲೆಯ ಜನಸಂಖ್ಯೆಗನುಗುಣವಾಗಿ 11000 ಯುನಿಟ್(ಪಿಂಟ್) ರಕ್ತದ ಅವಶ್ಯಕತೆಯಿದ್ದು, ಕೇವಲ 4500 ಯುನಿಟ್‍ನಷ್ಟು ಮಾತ್ರ ದಾನಿಗಳಿಂದ ರಕ್ತಸಂಗ್ರಹವಾಗುತ್ತಿದೆ. ಅಲ್ಲದೆ ಅಪಘಾತ, ಅನಾರೋಗ್ಯ, ಮತ್ತಿತರ ತುರ್ತು ಸಂದರ್ಭಗಳಲ್ಲಿ ರೋಗಿಯ ರಕ್ತದ ಗುಂಪಿಗೆ ಹೊಂದಿಕೆಯಾಗುವ ರಕ್ತ ಪೂರೈಕೆ ಮಾಡಲು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅಮೂಲ್ಯವಾದ ರಕ್ತವನ್ನು ದಾನ ಮಾಡಲು ಎಲ್ಲರೂ ಮನಸು ಮಾಡುವ ಮೂಲಕ ಅಪಾಯದಲ್ಲಿರುವ ಜೀವಗಳನ್ನು ಉಳಿಸಲು ನೆರವಾಗಬೇಕು ಎಂದರು.

      ಜಿಲ್ಲೆಯಲ್ಲಿರುವ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯಗಳು, ಕಾಲೇಜುಗಳ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸ್ವಯಂ ಸೇವಾ ಸಂಘ-ಸಂಸ್ಥೆಗಳ ಮೂಲಕ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಜಿಲ್ಲೆಯಲ್ಲಿ ಕೊರತೆಯಿರುವ ರಕ್ತವನ್ನು ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ.

       ಕೆಲವು ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವುಂಟಾದಾಗ ಶ್ರೀಮಂತರಿಗಿಂತ ಬಡ ರೋಗಿಗಳಿಗೆ ರಕ್ತ ಪಡೆಯಲು ಸಮಸ್ಯೆ ಉಂಟಾಗುವ ಸಾಧ್ಯತೆಯಿದ್ದು, ಇದನ್ನು ಸರಿದೂಗಿಸಲು ಆರೋಗ್ಯ ಇಲಾಖೆಯಿಂದ ಉಚಿತವಾಗಿ ರಕ್ತನಿಧಿ ಕೇಂದ್ರಗಳ ಮೂಲಕ ರಕ್ತ ಒದಗಿಸುವ ಕೆಲಸ ಮಾಡಲಾಗುತ್ತಿದೆ. ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ರೋಗಿಗಳಿಗೆ ರಕ್ತ ನೀಡುವ ಮುನ್ನ ಕಡ್ಡಾಯವಾಗಿ ರಕ್ತವನ್ನು ಹೆಚ್‍ಐವಿ ಸೋಂಕಿದೆಯೋ ಇಲ್ಲವೋ ಎಂಬ ಬಗ್ಗೆ ಪರೀಕ್ಷೆಗೊಳಪಡಿಸಬೇಕು ಎಂದು ಸೂಚಿಸಿದರಲ್ಲದೆ ರೋಗಿಗಳು ಪರೀಕ್ಷೆಗೊಳಪಡಿಸದ ರಕ್ತವನ್ನು ಪಡೆದು ಜೀವನ ಪರ್ಯಂತ ಕೊರಗುವಂತಾಗಬಾರದು ಎಂದು ತಿಳಿಸಿದರು.

       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಿ.ಆರ್. ಚಂದ್ರಿಕಾ ಮಾತನಾಡಿ ಪ್ರತಿ ದಾನಿಗಳಿಂದ 350 ಎಂ.ಎಲ್. ರಕ್ತವನ್ನು ಸಂಗ್ರಹಿಸಲಾಗುವುದು. ಸಂಗ್ರಹಿತ ರಕ್ತವನ್ನು ಅವಶ್ಯಕತೆಗನುಗುಣವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪೂರೈಕೆ ಮಾಡಲಾಗುವುದು

       ಮಲೇರಿಯಾ/ ನಿಫಾ ವೈರಸ್/ ಕ್ಯಾನ್ಸರ್/ ಹೆಚ್‍ಐವಿ ಪೀಡಿತರು ರಕ್ತದಾನ ಮಾಡುವಂತಿಲ್ಲ ಎಂದು ತಿಳಿಸಿದರಲ್ಲದೆ 18 ರಿಂದ 65 ವರ್ಷ ವಯೋಮಿತಿಯೊಳಗಿನ, 50 ಕೆ.ಜಿ. ತೂಕವಿರುವ, ಶಸ್ತ್ರಚಿಕಿತ್ಸೆಗೊಳಗಾಗದ ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದೆ. ಕ್ಯಾನ್ಸರ್, ಡೆಂಗ್ಯು, ರಕ್ತಹೀನತೆ, ಅಪಘಾತ, ಮತ್ತಿತರ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿರುವುದರಿಂದ ಯುವಕರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕೆಂದು ತಿಳಿಸಿದರು.

       ಸುಮಾರು 51 ಬಾರಿ ರಕ್ತದಾನ ಮಾಡಿದ ಬೆಳ್ಳಿ ಲೋಕೇಶ್ ಮಾತನಾಡಿ ರಕ್ತದಾನ ಮಾಡುವುದರಿಂದ ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ. ಪುರುಷರು ಪ್ರತಿ 3 ಹಾಗೂ ಮಹಿಳೆಯರು ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಯಾವುದೇ ಜಾತಿ/ಧರ್ಮ, ಹೆಣ್ಣು-ಗಂಡು ಬೇಧವಿಲ್ಲದೆ ಎಲ್ಲರೂ ರಕ್ತದಾನ ಮಾಡಿ ಜೀವನ್ಮರಣದ ನಡುವೆ ಹೋರಾಡುವವರಿಗೆ ಜೀವದಾನ ಮಾಡಬೇಕೆಂದು ಮನವಿ ಮಾಡಿದರು.

       ಶಿಬಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪತ್ನಿ ಪಿಯಾಂಕ ಕೋನ ವಂಶಿಕೃಷ್ಣ ಹಾಗೂ 115 ಮಂದಿ ಕಾರಾಗೃಹ ಇಲಾಖೆ ಪ್ರಶಿಕ್ಷಣಾರ್ಥಿಗಳು ರಕ್ತದಾನ ಮಾಡಿದರು.

       ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಜಿಲ್ಲೆಯ ಸತೀಶ್ ಪಾಟೀಲ್, ವಿಕ್ಟರ್, ನಾಗಭೂಷಣ್, ಬೆಳ್ಳಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಟಿ.ಎ. ವೀರಭದ್ರಯ್ಯ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಕ್ಷಯರೋಗಾಧಿಕಾರಿ ಡಾ|| ಜಿ. ಸನತ್‍ಕುಮಾರ್, ಜಿಲ್ಲಾ ಸಶಸ್ತ್ರ ಪಡೆಯ ಡಿವೈಎಸ್‍ಪಿ ಮಂಜುನಾಥ್, ಕುಟಂಬ ಕಲ್ಯಾಣಾಧಿಕಾರಿ ಡಾ|| ಮಹಿಮಾ, ಆರೋಗ್ಯ ಇಲಾಖೆ, ಮೋಹನ್‍ಕುಮಾರಿ, ರೂಪ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link