ಸತ್ಯ ಹೇಳಿದಕ್ಕೆ ನನ್ನ ವಿರುದ್ಧ ಕ್ರಮಕ್ಕೆ ರಾಜ್ಯ ನಾಯಕರಿಂದಲೇ ಒತ್ತಡ ಹೇರಲಾಗಿದೆ: ರೋಷನ್ ಬೇಗ್

ಬೆಂಗಳೂರು

    ಕಾಂಗ್ರೆಸ್‍ನಿಂದ ತಮ್ಮನ್ನು ಅಮಾನತು ಮಾಡಿರುವ ಕ್ರಮದ ವಿರುದ್ಧ ಹರಿಹಾಯ್ದಿರುವ ಹಿರಿಯ ನಾಯಕ ರೋಷನ್ ಬೇಗ್:ಸತ್ಯ ಹೇಳಿದ್ದಕ್ಕಾಗಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರೇ ವರಿಷ್ಟರ ಮೇಲೆ ಒತ್ತಡ ತಂದಿದ್ದಾರೆ ಎಂದು ಇಂದಿಲ್ಲಿ ದೂರಿದರು.

      ಬೆಂಗಳೂರಿನ ಫ್ರೆಜರ್ ಟೌನ್‍ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರು,ಹೀಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದೆ ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದವರು ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಬಹಿರಂಗವಾಗಿ ಕೆಲಸ ಮಾಡಿದರು.ಹೀಗೆ ಕೆಲಸ ಮಾಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಗೆಲ್ಲಿಸಿದರು.
ಅದೇ ರೀತಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಅವರನ್ನು ನಮ್ಮ ಪಕ್ಷದವರೇ ಸೋಲಿಸಿದರು.ಹೀಗೆ ನಮ್ಮ ಪಕ್ಷದವರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ.
ಆದರೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಅದರ ಅಪಾಯದ ಬಗ್ಗೆ ನಾನು ಸತ್ಯ ಹೇಳಿದೆ.ಹೀಗೆ ಸತ್ಯ ಹೇಳಿದ ಕಾರಣಕ್ಕಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

      ಸತ್ಯ ಹೇಳುವುದೇ ಅಪರಾಧವಾ?ಎಂದು ಪ್ರಶ್ನಿಸಿದ ಅವರು ನಾನು ಈ ಹಿಂದೆ ಏನು ಹೇಳಿದ್ದೆ?ಅದರಲ್ಲಿ ಯಾವ ಸುಳ್ಳೂ ಇಲ್ಲ ಎಂದರಲ್ಲದೆ,ನಾನು ಹೇಳಿದ್ದು ಸುಳ್ಳಾದರೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಮಾತ್ರ ಏಕೆ ಬಂತು?ಎಂದು ಪ್ರಶ್ನಿಸಿದರು.

      ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂತು.ಆದರೆ ನಾನು ಪ್ರತಿನಿಧಿಸುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಲೀಡ್ ಕೊಡಿಸಿದ್ದೇನೆ ಎಂದು ಅವರು ಮಾರ್ಮಿಕವಾಗಿ ನುಡಿದರು.

       ನನ್ನನ್ನು ಅಮಾನತು ಮಾಡಿದ್ದರೂ ನಾನು ನಿಷ್ಟಾವಂತ ಕಾಂಗ್ರೆಸ್ಸಿಗ.ಪಕ್ಷದ ಶಿಸ್ತಿನ ಸಿಪಾಯಿ ಎಂದು ಬಣ್ಣಿಸಿಕೊಂಡ ಅವರು,ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮಾತಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

       ಪಕ್ಷದಲ್ಲಿ ಉಪ್ಪು ತಿಂದವರು ಬೇಕಾದಷ್ಟು ಇದ್ದಾರೆ.ತುಮಕೂರು ಜಿಲ್ಲೆಯ ರಾಜಣ್ಣ ಅವರು ಉಪ್ಪು ತಿಂದಿಲ್ಲವಾ?ಬೆಳಗಾವಿ ಜಿಲ್ಲೆಯ ಜಾರಕಿಹೊಳಿ ಅವರು ಉಪ್ಪು ತಿಂದಿಲ್ಲವಾ?ಅವರ್ಯಾರಿಗೂ ನೀರು ಕುಡಿಸಿಲ್ಲ.ಆದರೆ ಉಪ್ಪು ತಿನ್ನದೆ ನಾನು ನೀರು ಕುಡಿಯಬೇಕಾಗಿದೆ.ಇದ್ಯಾವ ನ್ಯಾಯ?ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆ ಮಾಡಿದರು.

       ಪ್ರಜಾಪ್ರಭುತ್ವದಲ್ಲಿ ಮುಕ್ತ ಚರ್ಚೆ ಇರಬೇಕು.ನಾನು ರಾಜ್ಯದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಮನಸ್ಸಿನ ಬಾವನೆಯನ್ನು ಹೇಳಿದೆ ಎಂದ ಅವರು,ತುಮಕೂರಿನಲ್ಲಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಟಿಕೇಟ್ ತಪ್ಪಿಸಿದವರು ಯಾರು?ಎಂದು ಕೇಳಿದರು.

       ಮುದ್ದಹನುಮೇಗೌಡರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು.ಅವರಿಗೆ ಟಿಕೆಟ್ ನೀಡಿದ್ದರೆ ನಿಶ್ಚಿತವಾಗಿ ಮರಳಿ ಗೆಲ್ಲುತ್ತಿದ್ದರು.ಆದರೆ ಅವರಿಗೆ ಟಿಕೆಟ್ ತಪ್ಪಿಸಿದ ಹಿಂದಿರುವ ಕಾರಣವೇನು?ಎಂದು ಪ್ರಶ್ನಿಸಿದರು.

       ಸಧ್ಯದ ಬೆಳವಣಿಗೆಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ,ಮುನಿಯಪ್ಪ,ಹೆಚ್.ಕೆ.ಪಾಟೀಲ್ ಅವರನ್ನು ಭೇಟಿ ಮಾಡುತ್ತೇನೆ ಎಂದ ಅವರು,ತಮ್ಮನ್ನು ಅಮಾನತು ಮಾಡಿದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link