ಬಳ್ಳಾರಿ
ವಿಕಲಚೇತನರ ಕಲ್ಯಾಣಕ್ಕಾ ಸರಕಾರಗಳು ಮೀಸಲಿರಿಸಿದ ಶೇ.5ರಷ್ಟು ಹಣದಲ್ಲಿ ಎಷ್ಟು ವೆಚ್ಚ ಮಾಡಲಾಗಿದೆ. ಫಲಾನುಭವಿಗಳ ಸಂಖ್ಯೆ ಮತ್ತು ಅವರ ಜೀವನದಲ್ಲಾದ ಬದಲಾವಣೆ ಸೇರಿದಂತೆ ಸಮಗ್ರ ವಿವರಗಳನ್ನು ಅಧಿಕಾರಿಗಳು ಕೂಡಲೇ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚಿಸಿದರು.
ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತರ ಪ್ರವಾಸದ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿರಿಸಿದ ಅನುದಾನ ಮತ್ತು ಖರ್ಚು ಮಾಡಲಾದ ಅನುದಾನ ಸೇರಿದಂತೆ ಇನ್ನೀತರ ವಿವರಗಳನ್ನು ಒದಗಿಸುವಂತೆ ಡಿಯುಡಿಸಿ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದ ಅವರು ಎಲ್ಲ ಇಲಾಖೆಗಳ ಅಧಿಕಾರಿಗಳು ಸಹ ಇದೇ ನಿಯಮ ಅನುಸರಿಸುವಂತೆ ಸೂಚನೆ ನೀಡಿದರು.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಕುರಿತು ತಾವು ತಿಳಿದುಕೊಳ್ಳುವುದರ ಜತೆಗೆ ಜನರಿಗೂ ಕೂಡ ಹೆಚ್ಚಿನ ಅರಿವು ಮೂಡಿಸಬೇಕು. ಮುಂಚೆ 7 ಅಂಶಗಳಲ್ಲಿ ಒಂದಿದ್ದರೇ ಅಂಗವಿಕಲವೆಂದು ಪರಿಗಣಿಸಲಾಗುತ್ತಿತ್ತು; ಈಗ 21 ಅಂಶಗಳು ಸೇರ್ಪಡೆಯಾಗಿವೆ ಎಂದರು.
ಅಂಗವಿಕಲರ ಅಧಿನಿಯಮದ ಅನುಷ್ಠಾನ ಮತ್ತು ಅಂಗವಿಕಲರ ಹಕ್ಕುಗಳ ರಕ್ಷಣೆ ಕುರಿತು ಶಿಕ್ಷಣ ಇಲಾಖೆಯಲ್ಲಿ ಅಂಗವಿಕಲ ಮಕ್ಕಳ ಶಿಕ್ಷಣ ಮತ್ತು ಮೂಲ ಸೌಕರ್ಯ ಕಲ್ಪಿಸುವಿಕೆಗೆ ಸಂಬಂಧಿಸಿದಂತೆಯೂ ಜಿಲ್ಲಾಧಿಕಾರಿ ನಕುಲ್ ಅವರು ಚರ್ಚಿಸಿದರು.
ಕಳೆದ ವರ್ಷದಲ್ಲಿ ಎಲ್ಲ ಇಲಾಖೆಗಳು ಒಟ್ಟಾರೆ ಅಂಗವಿಕಲರಿಗೆ ನೀಡಲಾದ ಸೌಲಭ್ಯಗಳ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ ಅವರು ಅಂಗವಿಕಲರಿಗೆ ನೀಡಲಾದ ಸೌಲಭ್ಯಗಳ ಮಾಹಿತಿ ಮತ್ತು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ಸಮಂಜಸ ಸೌಕರ್ಯ ವಾತಾವರಣ ಕಲ್ಪಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲಿಸಿ ವರದಿ ಸಿದ್ದಪಡಿಸಿ ಎಂದರು.ಎಲ್ಲ ಇಲಾಖೆಗಳಲ್ಲಿ ವಿಕಲಚೇತನರಿಗಾಗಿ ಶೇ.5ರಷ್ಟು ಹಣ ಮೀಸಲಿಡಲಾಗಿದ್ದು,ಅವುಗಳ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಿ ಟೆಂಡರ್ ಕರೆದು ಕ್ರಮಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಮಹಾಂತೇಶ ಅವರು ಸಭೆಯ ಉದ್ದೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








