ಚಿತ್ರದುರ್ಗ:
ಮಾಸಿಕ ಮೂರು ಸಾವಿರ ರೂ.ಪಿಂಚಣಿ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ವಿಕಲಚೇತನರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಒಕ್ಕೂಟದಡಿ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ವಿಕಲಚೇತನರು ಅಂಬೇಡ್ಕರ್ ವೃತ್ತ, ಮದಕರಿನಾಯಕ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ತ್ರಿಚಕ್ರ ವಾಹನ ಹಾಗೂ ಊರುಗೋಲುಗಳ ಸಹಾಯದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಕಲಚೇತನರು ಕಳೆದ ಮೂರು ತಿಂಗಳಿನಿಂದಲೂ ಪಿಂಚಣಿ ನೀಡಿಲ್ಲ. ಹೀಗಾದರೆ ನಮ್ಮ ಪಾಡೇನು ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.ಎಲ್ಲಾ ವಸತಿ ನಿಗಮಗಳ ಯೋಜನೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿಯನ್ನು ನೀಡಿ ವಸತಿ ಸೌಲಭ್ಯ ಒದಗಿಸಬೇಕು.
ಸಮೀಕ್ಷೆ ಮಾಡುವ ಮೂಲಕ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಬೇಕು. ಈಗ ನೀಡುತ್ತಿರುವ ತ್ರಿಚಕ್ರ ವಾಹನ ಸ್ಕೂಟಿ ಬದಲಿಗೆ ಆಕ್ಟಿವಾ ಹೊಂಡ ಕೊಡಬೇಕು.
ವಿಕಲಚೇತನರನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ನೀಡುತ್ತಿರುವ ಐವತ್ತು ಸಾವಿರ ರೂ.ಸಹಾಯ ಧನವನ್ನು ನಾಲ್ಕು ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು.ವಿಕಲಚೇತನರನ್ನು ವಿಕಲಚೇತನರೆ ಮದುವೆಯಾದರೆ ಅಂತಹವರಿಗೆ ಕಡ್ಡಾಯವಾಗಿ ನಾಲ್ಕು ಲಕ್ಷ ರೂ.ಸಹಾಯ ಧನ ನೀಡಬೇಕು.
ಗ್ರಾ.ಪಂ., ತಾಲೂಕು ಪಂಚಾಯಿತಿಗಳಲ್ಲಿ ವಿಕಲಚೇತನರಿಗೆ ಮೀಸಲಿರುವ ಶೇ. 5 ರಷ್ಟು ಅನುದಾನ ಇನ್ನು ವಿಕಲಚೇತನರ ಕೈಸೇರುತ್ತಿಲ್ಲ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.ವಿಕಲಚೇತನರು ಗುಳೆ ಹೋಗದಂತೆ ತಡೆಗಟ್ಟಲು ಉದ್ಯೋಗಖಾತ್ರಿ ಯೋಜನೆ ಅತ್ಯಂತ ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ವಿಕಲಚೇತನರು ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಕೆ.ವೆಂಕಟೇಶ್, ಕಾರ್ಯಾಧ್ಯಕ್ಷ ಕೆ.ಆನಂದ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪಾಪಣ್ಣ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಹೆಚ್.ಕುಂಟರಾಜ್, ಜೈಪ್ರಕಾಶ್ ಸೇರಿದಂತೆ ನೂರಾರು ವಿಕಲಚೇತನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.