ದಾವಣಗೆರೆ:
ಇಲ್ಲಿನ ಕೆ.ಆರ್.ಮಾರುಕಟ್ಟೆಯ ಪುಟ್‍ಪಾತ್ ವ್ಯಾಪಾರಿಗಳಿಗೆ, ಈಗಿರುವ ಸ್ಥಳದಲ್ಲಿಯೇ ಹಸಿರು ಹೊದಿಕೆ ಮಾಡಿಕೊಡುವ ಮೂಲಕ ವ್ಯಾಪಾರ ನಡೆಸಲು ಅನುವು ಮಾಡಿಕೊಡಬೇಕೆಂದು ಫುಟ್‍ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘ ಒತ್ತಾಯಿಸಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಇಸ್ಮಾಯಿಲ್, ಕಳೆದ 50 ವರ್ಷಗಳಿಂದ ಕೆ.ಆರ್.ಮಾರುಕಟ್ಟೆಯ ರಸ್ತೆ ಬದಿಯ ಫುಟ್‍ಪಾತ್‍ಗಳಲ್ಲಿ ಅಂದಾಜು 350ಕ್ಕೂ ಹೆಚ್ಚು ಜನ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ, ಈಗ ಸ್ಮಾರ್ಟ್‍ಸಿಟಿ ಕಾಮಗಾರಿಯ ನೆಪದಲ್ಲಿ ನಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಸ್ಮಾರ್ಟ್‍ಸಿಟಿ ಕಾಮಗಾರಿಯ ಹೆಸರಿನಲ್ಲಿ ನಮಗೆ ನೆರಳು ನೀಡಿದ್ದ ಸಾಲು ಮರಗಳ ಮಾರಣ ಹೋಮ ಮಾಡಲಾಗಿದೆ. ಅಲ್ಲದೇ, ಚಾಮರಾಜಪೇಟೆ ವೃತ್ತದಿಂದ ಕೆ.ಆರ್.ಮಾರುಕಟ್ಟೆ ರಸ್ತೆಯ ಮೂಲಕ ಹಾಸಭಾವಿ ವೃತ್ತದ ವರೆಗೆ ರಸ್ತೆಯನ್ನು ಅಗೆಯಲಾಗಿದೆ. ಹೀಗಾಗಿ ಇಡೀ ಮಾರುಕಟ್ಟೆ ಧೂಳುಮಯವಾಗಿದ್ದು, ತರಕಾರಿಯ ಮೇಲೆ ಧೂಳು ಕುಂತಿರುತ್ತದೆ. ಆದ್ದರಿಂದ ವ್ಯಾಪಾರ ನಡೆಯದೇ ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ದೂರಿದರು.
ಕಾಮಗಾರಿಯಿಂದ ಅಗೆದಿರುವ ರಸ್ತೆಗಳಲ್ಲಿ ಬಾರಲಾಗದೇ, ಗ್ರಾಹಕರು ಕೆ.ಆರ್.ಮರುಕಟ್ಟೆಗೆ ತರಕಾರಿ ಖರೀದಿಗೆ ಬರುತ್ತಿಲ್ಲ. ಹೀಗಾಗಿ ವ್ಯಾಪಾರವಿಲ್ಲದೇ ವ್ಯಾಪಾರವನ್ನು ಸ್ತಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾದರೆ, ನಾವು ಪಡೆದಿರುವ ಸಾಲ, ಫೈನಾನ್ಸ್ ತೀರಿಸುವುದಾದರೂ ಹೇಗೆ? ಮಕ್ಕಳ ಪಾಲನೆ-ಪೋಷಣೆ, ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ನಮ್ಮ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಈಗಾಗಲೇ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಮೂರು ಬಾರಿ ಅಹ್ವಾಲು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಮೊದಲು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ನಮ್ಮ ಸಮಸ್ಯೆಯನ್ನು ಆಲಿಸಿ, ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳಲು ಸ್ಮಾರ್ಟ್‍ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಕೆಲ ಮಾರ್ಗಸೂಚಿಗಳನ್ನು ನೀಡಿದ್ದರು. ಆದರೆ, ನಮ್ಮ ದುರ್ದೈವವೋ ಏನೋ ಗೊತ್ತಿಲ್ಲ. ಅವು ಅನುಷ್ಠಾನಗೊಳ್ಳುವ ಮೊದಲೇ ಅವರ ವರ್ಗಾವಣೆ ಆಯಿತು.
ನಂತರ ಬಂದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರ ಬಳಿ ನಮ್ಮ ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲಾಡಳಿತದಿಂದ ನಮಗೆ ಸಾಕಷ್ಟು ನಿರಾಸೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಿರ್ಗತಿಕ ಫುಟ್‍ಪಾತ್ ವ್ಯಾಪಾರಿಗಳ ಬಗ್ಗೆ ಜಿಲ್ಲಾಡಳಿತ ಅಲಕ್ಷ್ಯ ತೋರದೇ, ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರ ನೀಡಿರುವ ಮಾರ್ಗಸೂಚಿಯಂತೆ, ನಮ್ಮನ್ನು ಒಕ್ಕಲೆಬ್ಬಿಸದೇ ಈಗಿರುವ ಜಾಗದಲ್ಲಿಯೆ ಹಸಿರು ಹೊದಿಕೆ ನಿರ್ಮಾಣ ಮಾಡಿ, ವ್ಯಾಪಾರ ನಡೆಸಲು ಅನುವು ಮಾಡಿಕೊಡಬೇಕು.
ಸ್ಮಾರ್ಟ್‍ಸಿಟಿ ಕಾಮಗಾರಿ ಮೊದಲಿನ 100 ಮೀಟರ್‍ಗಳು ಪೂರ್ಣಗೊಂಡ ನಂತರವೇ ನಂತರದ 100 ಮೀಟರ್ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈಗ ಕಡಿತಲೆ ಮಾಡಿರುವ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಎನ್.ಶ್ರೀನಿವಾಸ್, ಕೆ.ಬಿ.ಸಿದ್ದಣ್ಣ, ಎಸ್.ಈರಣ್ಣ, ರಾಮಣ್ಣ, ಅಂಬುಜಮ್ಮ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
