ನಗರಸಭೆ ಅಧಿಕಾರಿಗಳಿಂದ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ರೈಡ್..!!

ಹೊನ್ನಾಳಿ:

     40 ಮೈಕ್ರಾನ್‍ಗಳಿಗಿಂತ ಕಡಿಮೆ ಗುಣಮಟ್ಟದ ಪ್ಲ್ಯಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ಪಟ್ಟಣದ ವಿವಿಧ ವಾಣಿಜ್ಯ ಮಳಿಗೆಗಳ ಮೇಲೆ ತಹಸೀಲ್ದಾರ್ ತುಷಾರ್ ಬಿ. ಹೊಸೂರ್ ಮತ್ತು ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ ಕಳಪೆ ಪ್ಲ್ಯಾಸ್ಟಿಕ್ ಬ್ಯಾಗ್‍ಗಳು, ಚಹಾ ಮತ್ತು ಕುಡಿಯುವ ನೀರು ತುಂಬಲು ಬಳಸುವ ಲೋಟ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿತು.

      ನಂತರ ಮಾತನಾಡಿದ ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕಬೇಕು. ಸಾಧ್ಯವಾದಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂರ್ಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದರು.

      ಪ್ಲ್ಯಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿ ಬೆರೆತು ಕೊಳೆಯುವುದಿಲ್ಲ. ಹಾಗಾಗಿ, ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಪ್ಲ್ಯಾಸ್ಟಿಕ್ ವಸ್ತುಗಳ ಹೀಗೇ ಮುಂದುವರೆದರೆ ಒಂದು ದಿನ ಇಡೀ ಭೂಮಿ ಪ್ಲ್ಯಾಸ್ಟಿಕ್‍ಮಯವಾಗುತ್ತದೆ. ಫಲವತ್ತಾದ ಭೂಮಿ ಬಂಜರು ಭೂಮಿಯಾಗಿ ಪರಿವರ್ತನೆಯಾಗುತ್ತದೆ. ಭೂಮಿಯಲ್ಲಿ ಹುದುಗಿರುವ ಪ್ಲ್ಯಾಸ್ಟಿಕ್ ವಿಷವಾಗಿ ಪರಿವರ್ತನೆಯಾಗುತ್ತದೆ.

       ಪ್ಲ್ಯಾಸ್ಟಿಕ್‍ನಿಂದ ಆವೃತವಾಗಿರುವ ತಿನಿಸುಗಳನ್ನು ಸೇವಿಸುವ ಹಸು, ಎಮ್ಮೆ ಮತ್ತಿತರ ಮೂಕ ಪ್ರಾಣಿಗಳ ದೇಹದಲ್ಲಿ ವಿಷಕಾರಿ ವಷ್ತು ಸಂಗ್ರಹಣೆಗೊಂಡು ಪ್ರಾಣಕ್ಕೆ ಎರವಾಗುತ್ತದೆ. ಆದ್ದರಿಂದ, ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದರು.ಪ್ಲ್ಯಾಸ್ಟಿಕ್‍ನ ವ್ಯಾಪಕ ಬಳಕೆಯಿಂದ ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಆದ್ದರಿಂದ, ಅಂಗಡಿಗಳಲ್ಲಿ ಪ್ಲ್ಯಾಸ್ಟಿಕ್ ಮಾರಾಟ ಮಾಡಬಾರದು ಎಂದು ಹೇಳಿದರು. ಪಪಂ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಮೇಲೆ ಇನ್ನು ಮುಂದೆ ನಿರಂತರವಾಗಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

      ಪ್ಲ್ಯಾಸ್ಟಿಕ್‍ನಿಂದ ಮನುಷ್ಯ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾನೆ. ಪಟ್ಟಣದ ರಸ್ತೆಗಳು ಪ್ಲ್ಯಾಸ್ಟಿಕ್‍ಮಯವಾಗುತ್ತಿವೆ. ಚರಂಡಿಗಳಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳು ಶೇಖರಣೆಗೊಂಡು ಕೊಳಚೆ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ದುರ್ವಾಸನೆ ಹೆಚ್ಚಾಗುತ್ತದೆ. ಸೊಳ್ಳೆಗಳ ಕಾಟ ತೀವ್ರವಾಗುತ್ತದೆ ಎಂದು ವಿವರಿಸಿದರು.

       ಹಳೆಯ ಎಲೆಕ್ಟ್ರಾನಿಕ್ಸ್ ನಿರುಪಯುಕ್ತ ವಸ್ತುಗಳಾದ ಟಿವಿ, ಕಂಪ್ಯೂಟರ್, ಮೊಬೈಲ್ ಫೋನ್‍ಗಳು ಮತ್ತಿತರ ಉಪಕರಣಗಳನ್ನು ಪಪಂನ ಕಸ ಸಂಗ್ರಹಣಾ ವಾಹನದಲ್ಲಿ ಹಾಕಬೇಕು. ಹೀಗೆ ಸಂಗ್ರಹವಾದ ಇ-ತ್ಯಾಜ್ಯವನ್ನು ಬೆಂಗಳೂರಿನ ಜಾಲಹಳ್ಳಿಯಲ್ಲಿನ ಎಲೆಕ್ಟ್ರಾನಿಕ್ಸ್ ನಿರುಪಯುಕ್ತ ಉಪಕರಣಗಳನ್ನು ನಾಶಪಡಿಸುವ ಘಟಕಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

      ಅಂಗಡಿಗಳಿಂದ ಈ ಬಾರಿ ಪ್ಲ್ಯಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಪ್ರವೃತ್ತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.ಪಪಂ ಕಿರಿಯ ಇಂಜಿನಿಯರ್ ದೇವರಾಜ್, ಆರೋಗ್ಯ ನಿರೀಕ್ಷಕ ನಾಗೇಶ್, ಸ್ವಚ್ಛತಾ ರಾಯಭಾರಿ ಕತ್ತಿಗೆ ನಾಗರಾಜ್, ಅಂಕಣ್ಣ ಮತ್ತು ಪಪಂನ 20ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link