ಪತ್ನಿ ತಲೆಗೆ ಖಾಲಿ ಸಿಲಿಂಡರ್ ನಿಂದ ಹೊಡೆದು ಕೊಲೆ..!!!

ಬೆಂಗಳೂರು

     ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿದು ಬಂದು ಜಗಳ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದ ಪತ್ನಿಯ ತಲೆಗೆ ಖಾಲಿ ಸಿಲಿಂಡರ್‍ನಿಂದ ಹೊಡೆದು ಕೊಲೆಗೈದು, ಪರಾರಿಯಾಗಿದ್ದ ಪತಿಯನ್ನು ತಮಿಳುನಾಡಿನ ಧರ್ಮಾವರಂನಲ್ಲಿ ಬಂಧಿಸುವಲ್ಲಿ ಮೈಕೋ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮೈಕೋ ಲೇಔಟ್ ಬಿಳೇಕಳ್ಳಿಯಲ್ಲಿ ವಾಸಿಸುತ್ತಿದ್ದ ಪತ್ನಿ ಉಮಾರಾಣಿ (30)ಯನ್ನು ಕಳೆದ ಶುಕ್ರವಾರ ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಚಿನ್ನಸ್ವಾಮಿ (35)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

      ತಮಿಳುನಾಡಿನ ಮೂಲದ ಆರೋಪಿ ಚಿನ್ನಸ್ವಾಮಿ ಹಾಗೂ ಉಮಾರಾಣಿ 12 ವರ್ಷಗಳ ಹಿಂದೆ ವಿವಾಹವಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಸೇರಿ ಮೂವರು ಮಕ್ಕಳಿದ್ದಾರೆ. ಚಿನ್ನಸ್ವಾಮಿ, ಉಮಾರಾಣಿ 2ನೇ ಪತ್ನಿಯಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ದಂಪತಿ ಬಿಳೇಕಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.

     ಉಮಾರಾಣಿ ಖಾಸಗಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ (ಹೌಸ್ ಕೀಪಿಂಗ್) ಮಾಡುತ್ತಿದ್ದರೆ, ಚಿನ್ನಸ್ವಾಮಿ ಗುಜರಿ ವ್ಯಾಪಾರ ಮಾಡುತ್ತಿದ್ದ. ಇತ್ತೀಚೆಗೆ ಕುಡಿತದ ಚಟ ಅಂಟಿಸಿಕೊಂಡಿದ್ದ ಆತ ಪ್ರತಿದಿನ ಕುಡಿದು ಬಂದು ಪತ್ನಿ ಜೊತೆಗೆ ಜಗಳವಾಡುತ್ತಿದ್ದ

ಕುಟುಂಬ ನಿರ್ವಹಣೆ

     ಕುಡಿತ ಬಿಡುವಂತೆ ಎಷ್ಟು ಬಾರಿ ಪತ್ನಿ ಬುದ್ದಿ ಹೇಳಿದರೂ ಚಿನ್ನಸ್ವಾಮಿ ತನ್ನ ವರ್ತನೆಯನ್ನು ಸರಿಮಾಡಿಕೊಂಡಿರಲಿಲ್ಲ. ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿದು ಓಡಾಡುತ್ತಿದ್ದ ಆತನೊಂದಿಗೆ ಹಲವು ಬಾರಿ ಜಗಳವಾಡಿ ಉಮಾರಾಣಿಯವರೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು.

     ಕಳೆದ ಜುಲೈ 12 ರಂದು ರಾತ್ರಿ ಕುಡಿದು ಮನೆಗೆ ಬಂದ ಚಿನ್ನಸ್ವಾಮಿ ಪತ್ನಿ ಬಳಿ ತೆಗೆದ ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಚಿನ್ನಸ್ವಾಮಿ ಅಡುಗೆ ಮನೆಯಲ್ಲಿದ್ದ ಖಾಲಿ ಸಿಲಿಂಡರ್‍ನಿಂದ ಉಮಾರಾಣಿ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಕುಸಿದು ಬಿದ್ದಿದ್ದು, ಮಕ್ಕಳು ಚೀರಾಡಲು ಆರಂಭಿಸಿದ್ದಾರೆ.

ಶವದ ಬಳಿ ಮಕ್ಕಳು

      ಇದರಿಂದ ಹೆದರಿದ ಆರೋಪಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ ರಕ್ತಸ್ರಾವದಿಂದ ಉಮಾರಾಣಿ ಮೃತಪಟ್ಟಿದ್ದು, ಸುಮಾರು 2 ಗಂಟೆಗಳ ಕಾಲ ಮಕ್ಕಳು ಶವದ ಮುಂದೆ ಕುಳಿತು ಕಣ್ಣೀರು ಹಾಕಿದ್ದಾರೆ. ಮಕ್ಕಳ ಕಣ್ಣೀರಿನ ಶಬ್ಧ ಕೇಳಿದ ಅಕ್ಕ- ಪಕ್ಕದ ಮನೆಯವರು ಬೀಗ ಹೊಡೆದು ಒಳಹೋಗಿ ನೋಡಿದಾಗ ಉಮಾರಾಣಿ ಕೊಲೆಯಾಗಿದ್ದರು.

      ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮೈಕೋ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ತಮಿಳುನಾಡಿನ ಧರ್ಮವರಂನಲ್ಲಿ ಅಡಗಿದ್ದ ಆರೋಪಿಯನ್ನು ಭಾನುವಾರ ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link