ನವದೆಹಲಿ:
ತಾಲಿಬಾನಿಗಳು ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಅಲ್ಲಿನ ‘ಭದ್ರತಾ ವ್ಯವಸ್ಥೆ’ ಹದಗೆಡುತ್ತಿರುವ ನಡುವೆಯೇ ಶನಿವಾರ ಕಾಬೂಲ್‌ನಿಂದ 85 ಕ್ಕೂ ಹೆಚ್ಚು ಭಾರತೀಯರನ್ನು ವಾಯುಪಡೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ.
ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ, ತಜಕಿಸ್ತಾನದ ದುಶಾಂಬೆ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಸಂಜೆ ವೇಳೆಗೆ ದೆಹಲಿ ಸಮೀಪದ ಹಿಂಡೋನ್ ವಾಯುನೆಲೆಯನ್ನು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ತಾಲಿಬಾನಿಗಳು ಕಾಬೂಲ್ ಪ್ರವೇಶಿಸಿದ ನಂತರದಲ್ಲಿ, ಭಾರತ, ವಾಯುಪಡೆಯ ಎರಡು ಯುದ್ಧ ವಿಮಾನಗಳ ಮೂಲಕ ರಾಯಭಾರಿ ಕಚೇರಿಯ ಸಿಬ್ಬಂದಿ ಸೇರಿದಂತೆ 200 ಜನರನ್ನು ಸ್ಥಳಾಂತರಿಸಿತ್ತು. ಸೋಮವಾರ 40 ಭಾರತೀಯರನ್ನು ಸ್ಥಳಾಂತರಿಸಿತು. ಎರಡನೇ ಹಂತದಲ್ಲಿ, ಮಂಗಳವಾರ ಭಾರತೀಯ ರಾಜತಾಂತ್ರಿಕರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಕೆಲವು ನಾಗರಿಕರನ್ನೂ ಒಳಗೊಂಡಂತೆ ಸುಮಾರು 150 ಜನರನ್ನು ಸ್ಥಳಾಂತರಿಸಲಾಯಿತು.
ಕಾಬೂಲ್ ಸೇರಿದಂತೆ ವಿವಿಧೆಡೆ ಸಂತ್ರಸ್ತರಾಗಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕಾರ್ಯ ಪ್ರಗತಿಯಲ್ಲಿದೆ. ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ