ನವದೆಹಲಿ:
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಮಗೆ ನೀಡಿಲಾಗಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ರಜಾಕಾಲದ ಪೀಠ ಅರ್ಜಿಯ ವಿಚಾರಣೆ ಜೂನ್ 26ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ಕೇಜ್ರಿವಾಲ್ ಅವರ ಮನವಿಯ ಕುರಿತು ಯಾವುದೇ ತಕ್ಷಣದ ಆದೇಶವನ್ನು ನೀಡಲು ನಿರಾಕರಿಸಿದೆ.
“ದೆಹಲಿ ಹೈಕೋರ್ಟ್ ಆದೇಶವು ಮೊದಲು ದಾಖಲೆಗೆ ಬರಲಿ ಮತ್ತು ಯಾವುದೇ ತಕ್ಷಣದ ಆದೇಶವಿಲ್ಲದೆ ನಾವು ಮುಂದಿನ ವಾರ ಪ್ರಕರಣದ ವಿಚಾರಣೆ ಮುಂದುವರಿಸಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿ, ಕೇಜ್ರಿವಾಲ್ ಅವರ ಅರ್ಜಿಯ ವಿಚಾರಣೆಯನ್ನು ಜೂನ್ 26, ಬುಧವಾರಕ್ಕೆ ಮುಂದೂಡಿತು.
ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಅವರಿಗೆ ನೀಡಿದ ಜಾಮೀನನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ ಮೇಲ್ಮನವಿಯ ಮೇಲೆ ದೆಹಲಿ ಹೈಕೋರ್ಟ್ ತಡೆ ನೀಡಿದೆ ಮತ್ತು ತನ್ನ ಆದೇಶವನ್ನು ಕಾಯ್ದಿರಿಸಿದೆ. ಹೈಕೋರ್ಟ್ ತನ್ನ ಆದೇಶವನ್ನು ನಾಳೆ ಅಥವಾ ಬುಧವಾರ ಪ್ರಕಟಿಸುವ ನಿರೀಕ್ಷೆಯಿದೆ.
