ಲಕ್ನೋ:
ಉತ್ತರ ಪ್ರದೇಶ ಬಿಜೆಪಿಯಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳ ನಡುವೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ತಮ್ಮ ಎಕ್ಸ್‌ನಲ್ಲಿ ಬರೆದು ಕೊಂಡಿರುವ ವಿಷಯ ಹಲವರ ನಿದ್ದೆಗೆಡುವಂತೆ ಮಾಡಿದೆ.
ಯಾದವ್ ಅವರು ತಮ್ಮ ಪೋಸ್ಟ್‌ನಲ್ಲಿ ಯಾರನ್ನೂ ಹೆಸರಿಸದಿದ್ದರೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅತೃಪ್ತಗೊಂಡು ಬಿಜೆಪಿ ತೊರೆಯಲು ಸಿದ್ದರಾಗಿರುವವರಿಗೆ ಇದು ಸಂದೇಶವಾಗಿದೆ ಎಂದು ಹೆಸರು ಹೇಳಲು ಬಯಸದ ಎಸ್‌ಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಗೆದ್ದಿದೆ. ನಮಗೆ 100 ಅತೃಪ್ತ ಬಿಜೆಪಿ ಶಾಸಕರ ಬೆಂಬಲ ಸಿಕ್ಕರೆ, ನಾವು ಸುಲಭವಾಗಿ ಸರ್ಕಾರ ರಚಿಸುತ್ತೇವೆ” ಎಂದು ಎಸ್‌ಪಿ ನಾಯಕ ವಿವರಿಸಿದರು.
ಬಿಜೆಪಿಯ ರಾಜ್ಯ ಘಟಕದಲ್ಲಿ ಭಿನ್ನಾಭಿಪ್ರಾಯದ ಬಗ್ಗೆ ರಾಜ್ಯ ಪಕ್ಷದ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸರ್ಕಾರಕ್ಕಿಂತ ಪಕ್ಷ ದೊಡ್ಡದಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ಸಚಿವರು, ಶಾಸಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರನ್ನು ಗೌರವಿಸಬೇಕು ಎಂದು ಅವರು ಒತ್ತಾಯಿಸಿದರು.
ಮೌರ್ಯ ಅವರು ಮಂಗಳವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು ಆದರೆ ಬಿಜೆಪಿ ಅಥವಾ ಉಪಮುಖ್ಯಮಂತ್ರಿ ಮೌರ್ಯ ಸಭೆಯ ಬಗ್ಗೆ ಏನನ್ನೂ ಹೇಳಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋತವರು ಸೇರಿದಂತೆ ಉತ್ತರ ಪ್ರದೇಶದ ಹಲವಾರು ಬಿಜೆಪಿ ನಾಯಕರು ಮುಖ್ಯಮಂತ್ರಿಯವರ ಕಾರ್ಯಶೈಲಿಯನ್ನು ಟೀಕಿಸಿದ್ದಾರೆ ಮತ್ತು ತಮ್ಮ ಸೋಲಿಗೆ ಒಂದು ಕಾರಣವೆಂದು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.