ಅಯ್ಯೋ…, ಯಾಕ್ ಕೇಳ್ತೀರಾ ಬಿಡಿ ಸ್ವಾಮಿ ನಮ್ ಪಾಡು

ತುರುವೇಕೆರೆ:

ಅಯ್ಯೋ…, ಯಾಕ್ ಕೇಳ್ತೀರಾ ಬಿಡಿ ಸ್ವಾಮಿ ನಮ್ ಪಾಡು. ನಾವೆಲ್ಲಾ ನೆಲ ಕಚ್ಚೋದ್ವು. ಬಡವನ ಕೋಪ ದವಡೆಗೆ ಮೂಲ ಅನ್ನಂಗಾಗೈತೆ ನಮ್ ಪಾಡು. ಏನೋ ಈ ಬಾರಿ ರಾಗಿ ಬೆಳೆ ನಮ್ ಕೈಸೇರತೈತೆ ಅಂತ ಅದ್ಕೋಂಡಿದ್ವು. ಮಳೆರಾಯ ಅದಕ್ಕೂ ಕಲ್ಲಾಕ್ದ. ನಾವ್ ತಾನೆ ಏನ್ ಮಾಡಕ್ಕಾಗುತ್ತೆ. ನಮ್ ಹಣೇಲಿ ಬರ್ದಂಗಾಗ್ಲಿ ಬಿಡಿ…! ಹೀಗೆ ತಮ್ಮ ಮನದಾಳದ ನೋವುಗಳನ್ನು ಹೊಸಳ್ಳಿ ಗ್ರಾಮದ ರೈತ ನಂಜುಂಡಪ್ಪ ಹಂಚಿಕೊಂಡಾಗ ಎಂತಹವರ ಮನಸ್ಸು ಚುರುಕ್ಕನ್ನದೆ ಇರದು.

ಮಳೆಯನ್ನೇ ಅವಲಂಬಿಸಿರುವ ನಂಜುಂಡಪ್ಪ ತನ್ನ ಎರಡು ಎಕರೆ ಜಮೀನಿನಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಉತ್ತು-ಬಿತ್ತು, ಸಾಲ-ಸೋಲ ಮಾಡಿ ಗೊಬ್ಬರ ಹಾಕಿ, ಕಳೆ ಕಿತ್ತು, ಈ ಬಾರಿ ಕಾಲ ಕಾಲಕ್ಕೆ ಮಳೆಯಾಗಿದ್ದರಿಂದ ಇನ್ನೇನೂ ರಾಗಿ ಬೆಳೆ ಕೈಗೆ ಬಂದೇ ಬಿಟ್ಟಿತು ಎಂಬ ಆಶಾಭಾವನೆ ಹೊಂದಿದ್ದರು. ಆದರೇ ಎಡಬಿಡದೆ ಸುರಿದ ಮಳೆಯಿಂದ ರಾಗಿಬೆಳೆ ಸಂಪೂರ್ಣ ನೆಲಕಚ್ಚಿದ್ದು, ಈ ರೈತ ತಲೆಮೇಲೆ ಕೈ ಹೊತ್ತು ಕೂರುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಹೊಸಳ್ಳಿ ನಂಜುಂಡಪ್ಪನೊಬ್ಬನ ಕಥೆಯಲ್ಲ, ಜಿಲ್ಲೆಯಲ್ಲಿ ಸಾವಿರಾರು ಜನ ರೈತರು ಅಕಾಲಿಕ ಮಳೆಯಿಂದಾಗಿ ಬೆಳೆ ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದ್ದಾರೆ.

ಸತತ ಮಳೆಯಿಂದ ಬೆಳೆ ಹಿನ್ನಡೆ :

ಹಿಂಗಾರು-ಮುಂಗಾರಿನ ಪ್ರಾರಂಭದಿಂದಲೂ ಉತ್ತಮ ಮಳೆಯಾದ್ದರಿಂದ ತಾಲೂಕಿನಲ್ಲಿ ನೂರಾರು ಹೆಕ್ಟೇರ್ ರಾಗಿ ಬೆಳೆಯನ್ನು ಬಿತ್ತಲಾಗಿತ್ತು. ಆದರೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಗಿ ಪೈರು ನೆಲ ಕಚ್ಚಿದೆ. ರಾಗಿ ತೆನೆ ಮಳೆಯಿಂದ ನೆನೆದು ತೆನೆಯ ಭಾರಕ್ಕೆ ನೆಲಕ್ಕೆ ಮಲಗಿ ಮೊಳಕೆ ಒಡೆಯಲು ಆರಂಭಿಸಿದೆ. ಮಳೆಯಲ್ಲಿ ತೊಯ್ದ ರಾಗಿ ಹುಲ್ಲು ಸಹ ಹಾಳಾಗಿದ್ದು, ದನ-ಕರುಗಳ ಮೇವಿಗೆ ಸಂಚಕಾರ ಬಂದೊದಗಿದೆ.

ವಾಣಿಜ್ಯ ಬೆಳೆಗಳಿಗೂ ಸಂಕಷ್ಟ :

ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೆಂಗು, ಅಡಕೆ, ಬಾಳೆಗೂ ಸಂಕಷ್ಟ ಉಂಟಾಗಿದೆ. ತೆಂಗು ಹಾಗೂ ಅಡಕೆ ತೋಟಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದು, ಫಸಲು ಕೀಳದ ಪರಿಸ್ಥಿತಿ ಉಂಟಾಗಿದೆ. ಮಳೆಯಲ್ಲಿ ಆಳು-ಕಾಳುಗಳು ಬಾರದ ಕಾರಣ, ಹಣ್ಣಾಗಿ ಭೂಮಿಗೆ ಬಿದ್ದ ತೆಂಗು, ಅಡಕೆ ಕಾಯಿಗಳು ಒಬ್ಬರ ತೋಟದಿಂದ ಮತ್ತೊಬ್ಬರ ತೋಟಕ್ಕೆ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಕೆರೆ ಆಸುಪಾಸಿನ ಜಮೀನುಗಳಲ್ಲಿ ಬಿದ್ದ ತೆಂಗಿನ ಕಾಯಿಗಳು ನೀರಿನಿಂದ ಕೆರೆ ಕಟ್ಟೆಗಳ ಪಾಲಾಗುತ್ತಿವೆ. ಜೊತೆಗೆ ಕಾಯಿ ನೀರಿನಲ್ಲಿ ಕೊಳೆತು ಕೊಬ್ಬರಿ ಕೆಡುವ ಸಂಭವವಿದೆ. ಬಾಳೆಯ ಬೇರುಗಳು ಗಟ್ಟಿಯಿಲ್ಲದ ಕಾರಣ ಗೊನೆಯು ಬಾರದಿಂದ ಕಾಯಿ ಬಲಿಯುವ ಮೊದಲೆ ಬುಡ ಸಮೇತ ಭೂಮಿಗೆ ಬಾಗುವುದರಿಂದ ಬಾಳೆಯಿಂದಲೂ ರೈತರಿಗೆ ನಷ್ಟವಾಗುತ್ತಿದೆ.

ಸರ್ಕಾರ ರೈತರ ನೆರವಿಗೆ ಧಾವಿಸಲಿ :

ಅತಿವೃಷ್ಟಿಗೆ ಸಿಲುಕಿ ನಲುಗುತ್ತಿರುವ ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗಳು ಕೊನೆ ಕ್ಷಣದಲ್ಲಿ ಕೈಗೆ ಬಾರದಿದ್ದರೆ ಮುಂದೆ ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ? ಈ ನಿಟ್ಟಿನಲ್ಲಿ ಸರ್ಕಾರವು ಮುಂದೆ ಬಂದು ರೈತÀರಿಗೆ ಆತ್ಮಸ್ಥೈರ್ಯ ತುಂಬಿ, ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ಹಾಗೂ ಜಾನುವಾರುಗಳಿಗೆ ಮೇವು ನೀಡುವ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಹೊಲದಲ್ಲಿ ನೀರು ನಿಂತು ರಾಗಿ ಬೆಳೆ ನೀರಿನಲ್ಲಿ ಕೊಳೆಯುತ್ತಿದೆ. ಅಷ್ಟೊ ಇಷ್ಟೊ ಉಳಿದಿರುವ ಪೈರನ್ನು ಕೊಯ್ದು, ತೆನೆ ಬೇರ್ಪಡಿಸಿ ಒಣಗಿಸಬೇಕಾಗಿದೆ. ಆದರೇ ಬಿಸಿಲೇ ಹತ್ತುತ್ತಿಲ್ಲ. ಮಳೆ ಹೀಗೆಯೆ ಮುಂದುವರಿದರೆ ದನಕರುಗಳಿಗೆ ಮೇವು ಸಹ ಸಿಗಲ್ಲ. ಸರ್ಕಾರ ಬೆಳೆ ವಿಮೆ ಕೊಟ್ಟರೂ ಅದು ಯಾವುದಕ್ಕೂ ಸಾಲುವುದಿಲ್ಲ. ಉಳ್ಳವರು ನಮಗೆ ಸಾಲ ಕೊಡಲಿಕ್ಕೂ ಹಿಂದು ಮುಂದು ನೋಡುತ್ತಾರೆ. ಹೀಗಾದರೇ ನಮ್ಮಂತಹ ಬಡ ರೈತರ ಪಾಡೇನು ಸ್ವಾಮಿ…?
-ನಂಜುಂಡಪ್ಪ, ರೈತ

                                                                                    -ಮಲ್ಲಿಕಾರ್ಜುನ ದುಂಡ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap