ಹೈದರಾಬಾದ್:
ಪುಷ್ಪಾ 2 ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಒಸ್ಮನಿಯಾ ವಿವಿ ಜಂಟಿ ಕ್ರಿಯಾ ಸಮಿತಿ ಎಂದು ಹೇಳಿಕೊಂಡ ಗುಂಪೊಂದು ಭಾನುವಾರ ನಟ ಅಲ್ಲು ಅರ್ಜುನ್ ಅವರ ನಿವಾಸದ ಬಳಿ ದಾಂಧಲೆ ನಡೆಸಿದೆ. ಇದೀಗ ಅಲ್ಲು ಅರ್ಜುನ್ ಅವರ ಕುಟುಂಬಸ್ಥರು ತಮ್ಮ ಸುರಕ್ಷತೆಗಾಗಿ ನಿವಾಸ ತೊರೆದಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಮಕ್ಕಳು ಕಾರನಲ್ಲಿ ತೆರಳುತ್ತಿರುವ ದೃಶ್ಯ ವೈರಲ್ ಆಗಿದೆ.
ಘಟನೆಯ ನಂತರ ತಮ್ಮ ಮಕ್ಕಳ ಸುರಕ್ಷತೆಗಾಗಿ ಅಲ್ಲು ಕುಟುಂಬ ನಿವಾಸ ತೊರೆದಿದೆ ಎಂದು ಹೇಳಲಾಗಿದೆ. ಮಕ್ಕಳಾದ ಅಲ್ಲು ಆರ್ಹಾ ಮತ್ತು ಅಲ್ಲು ಅಯಾನ್ ಹಾಗೂ ಇತರ ಕುಟುಂಬ ಸದಸ್ಯರು ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ತಮ್ಮ ಮನೆಯ ಹೊರಗೆ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಅಲ್ಲು ಅರ್ಜುನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಅವರ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಭಾನುವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಮನೆ ಮೇಲಿನ ದಾಳಿಯನ್ನು ಉದ್ದೇಶಿಸಿ ಮಾತನಾಡಿದರು. ದಾಳಿಯನ್ನು ಖಂಡಿಸಿದ ಅವರು, ಇಂತಹ ಘಟನೆಗಳನ್ನು ಪ್ರೋತ್ಸಾಹಿಸಬಾರದು ಎಂದರು.
ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲು ಅರವಿಂದ್, “ಇಂದು ನಮ್ಮ ಮನೆಯಲ್ಲಿ ಏನಾಯಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಆದರೆ ನಾವು ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಸಮಯ ಬಂದಿದೆ. ನಾವು ಯಾವುದಕ್ಕೂ ಪ್ರತಿಕ್ರಿಯಿಸಲು ಇದು ಸರಿಯಾದ ಸಮಯವಲ್ಲ. ಪೊಲೀಸರು ವಿಧ್ವಂಸಕರನ್ನು ಬಂಧಿಸಿದ್ದಾರೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ” ಎಂದು ಅವರು ಹೇಳಿದರು.
