ವಾಷಿಂಗ್ಟನ್:
ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಅಮೆರಿಕದ ಖ್ಯಾತ ನಟಿಯೊಬ್ಬರು ಮುಕ್ತಕಂದಿಂದ ಶ್ಲಾಘಿಸಿದ್ದು, “ಶಾಂತಿಯ ಹಾದಿ, ಪ್ರಜಾಪ್ರಭುತ್ವದ ನಿಜವಾದ ಕೆಲಸ” ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವನ್ನು ಘೋಷಿಸಿದ್ದು, ಇದು ಜಾಗತಿಕ ಗಮನ ಸೆಳೆದಿದೆ. ಅಮೆರಿಕದ ಖ್ಯಾತ ಗಾಯಕಿ ಮತ್ತು ನಟಿ ಮೇರಿ ಮಿಲ್ಬೆನ್ ಕೂಡ ಸಿಎಎ ಅನುಷ್ಠಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೇರಿ ಮಿಲ್ಬೆನ್ ಇದು “ಶಾಂತಿಯ ಹಾದಿ ಮತ್ತು ಪ್ರಜಾಪ್ರಭುತ್ವದ ನಿಜವಾದ ಕೆಲಸ” ಎಂದು ಹೇಳಿದ್ದು, ನಾನು ಕ್ರಿಶ್ಚಿಯನ್ ನಂಬಿಕೆಯ ಮಹಿಳೆಯಾಗಿ, ಜಾಗತಿಕವಾಗಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ವಾದಿಸುವವಳಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾಗಿ ಬಂದ ಮುಸ್ಲಿಮೇತರ ವಲಸಿಗರು, ಕ್ರಿಶ್ಚಿಯನ್ನರು, ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನವನ್ನು ನಾನು ಸ್ವಾಗತಿಸುತ್ತೇನೆ. ಇದಕ್ಕಾಗಿ ಮೋದಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸುತ್ತೇನೆ” ಎಂದು ಮಿಲ್ಬೆನ್ ಟ್ವೀಟ್ ಮಾಡಿದ್ದಾರೆ.
ಮಿಲ್ಬೆನ್ ಅವರು ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಭಾರತ ಸರ್ಕಾರಕ್ಕೆ ಅವರ “ಕರುಣಾಮಯಿ ನಾಯಕತ್ವಕ್ಕಾಗಿ ಮತ್ತು ಮುಖ್ಯವಾಗಿ ಕಿರುಕುಳಕ್ಕೊಳಗಾದವರಿಗೆ ನೆಲೆ ನೀಡಿ, ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದಕ್ಕಾಗಿ” ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.
ಆಫ್ರಿಕನ್-ಅಮೆರಿಕನ್ ಹಿನ್ನೆಲೆಯ ಗಾಯಕಿಯಾಗಿರುವ ಮೇರಿ ಮಿಲ್ಬೆನ್ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಬಾಗಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು. ಭಾರತದ ರಾಷ್ಟ್ರಗೀತೆ ʼಜನ ಗಣ ಮನʼವನ್ನು ಹಾಡಿದ್ದರು. ಆ ಮೂಲಕ ಸುದ್ದಿಯಾಗಿದ್ದರಲ್ಲದೆ, ಮೋದಿ ವಿರೋಧಿಗಳ ಹುಬ್ಬೇರುವಂತೆ ಮಾಡಿದ್ದರು.
ಅಂತೆಯೇ ಸಂದರ್ಶನವೊಂದರಲ್ಲಿ ತಾನೇಕೆ ಮೋದಿ ಪಾದ ಸ್ಪರ್ಶಿಸಿದ್ದೆ ಎಂದು ಹೇಳಿದ್ದ ಮಿಲ್ಬೆನ್, ತಾನೇಕೆ ಮೋದಿಯವರ ಪಾದ ಸ್ಪರ್ಶಿಸಿದೆ ಮತ್ತಿತರ ವಿಚಾರಗಳನ್ನು ಮನ ಬಿಚ್ಚಿ ಮಾತನಾಡಿದ್ದರು. ಅಲ್ಲದೆ “ಭಾರತೀಯ ಮುಸ್ಲಿಮರನ್ನು ಮೋದಿ ಆಡಳಿತ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ” ಎಂಬರ್ಥದಲ್ಲಿ ಮಾಜಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ನೀಡಿದ್ದ ಹೇಳಿಕೆಯನ್ನು ಮಿಲ್ಬೆನ್ ಬಲವಾಗಿ ಟೀಕಿಸಿದ್ದರು.