ಬೆಂಗಳೂರು:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ಸೋಮವಾರ (ಜೂ.10)ಕ್ಕೆ ಒಂದು ವರ್ಷ ತುಂಬುತ್ತಿದ್ದು, ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯ ಬಲವನ್ನು ಹೆಚ್ಚಿಸಿದೆ. ಯೋಜನೆಯ ಅಡಿಯಲ್ಲಿ ಸಾರಿಗೆ ಸಂಸ್ಥೆಯು ಪ್ರಸಕ್ತ 2023-24 ಆರ್ಥಿಕ ವರ್ಷದಲ್ಲಿ 3,349 ಕೋಟಿ ರೂಪಾಯಿ ದಾಖಲೆಯ ಆದಾಯವನ್ನು ಗಳಿಸಿದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಮಾತನಾಡಿ, ಕೆಎಸ್‌ಆರ್‌ಟಿಸಿಯ ಒಟ್ಟು ಸಂಚಾರ ಆದಾಯ 2016 ರಲ್ಲಿ 2,738 ಕೋಟಿ ರೂ ಆಗಿತ್ತು. 2017 ರಲ್ಲಿ 2,975 ಕೋಟಿ ರೂ., 2018 ರಲ್ಲಿ 3,131 ಕೋಟಿ ರೂ., 2019 ರಲ್ಲಿ 3,182 ಕೋಟಿ ರೂ, 2021 ರಲ್ಲಿ ರೂ 2,037 ಕೋಟಿ ಮತ್ತು 2022 ರಲ್ಲಿ ರೂ 3,349 ಕೋಟಿಗಳು ಬಂದಿತ್ತು. ಶಕ್ತಿ ಯೋಜೆ ಜಾರಿಯಾದ ಬಳಿಕ ಅಂದರೆ 2023 ರ ಆದಾಯವು ರೂ 3,930 ಕೋಟಿಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
2023ರ ಜೂನ್‌ನಿಂದ 2024ರ ಮೇ ವರೆಗೆ ಒಟ್ಟು 4,809 ಕೋಟಿ ರೂ.ಗಳ ಆದಾಯ ಬಂದಿದ್ದು, ಶಕ್ತಿಯೇತರ ಪ್ರಯಾಣಿಕರಿಂದಲೂ ಆದಾಯ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಶಕ್ತಿಯೋಜನೆಯಿಂದ ಆದಾಯ ಶೇ.42.5 (ರೂ. 2,044 ಕೋಟಿ) ಇದ್ದರೆ, ಶಕ್ತಿಯೇತರ ಆದಾಯ ಶೇ.57.5 (ರೂ. 2,764 ಕೋಟಿ)ರಷ್ಟಿದೆ. ಓರ್ವ ಮಹಿಳಾ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ, ಮಕ್ಕಳು ಹಾಗೂ ಪತಿ ಕೂಡ ಬಸ್ ಹತ್ತುತ್ತಿದ್ದಾರೆ. ಇದರಿಂದ ಆದಾಯ ಹೆಚ್ಚಳವಾಗುತ್ತಿದೆ ಎಂದು ವಿವರಿಸಿದ್ದಾರೆ.
ಈ ಹಿಂದೆ, ನಮ್ಮ ದೈನಂದಿನ ಆದಾಯವು ಸುಮಾರು 9.7 ಕೋಟಿ ರೂಪಾಯಿಗಳಷ್ಟಿತ್ತು, ಈಗ 13.9 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ಇದಲ್ಲದೆ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರದಂತಹ ದಿನಗಳಲ್ಲಿ ಸಾಮಾನ್ಯವಾಗಿ ಬಸ್ ಗಳಲ್ಲಿ ಜನಸಂಖ್ಯೆ ಶೇಕಡಾ 50-60 ರಷ್ಟಿರುತ್ತಿತ್ತು. ಆದರೆ ಶಕ್ತಿ ಯೋಜನೆ ಬಳಿಕ ಶೇಕಡಾ 85 ಕ್ಕಿಂತ ಹೆಚ್ಚಾಗಿರುತ್ತದೆ. ಈಗ ಬಸ್ ಗಳಲ್ಲಿ ಜನರಿಲ್ಲದ ದಿನಗಳಿಲ್ಲದಂತಾಗಿದೆ. ಅಲ್ಲದೆ, ಪೀಕ್ ಹವರ್ ಅಲ್ಲದ ಸಮಯದಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇವೆಲ್ಲವೂ ಆದಾಯವನ್ನು ಹೆಚ್ಚಳಕ್ಕೆ ಸಹಾಯ ಮಾಡಿದೆ. ಡೀಸೆಲ್ ಬೆಲೆ ಲೀಟರ್‌ಗೆ 90 ರೂ.ಗೆ ಏರುತ್ತಿದ್ದರೂ ಯಾವುದೇ ದರ ಏರಿಕೆ ಇಲ್ಲದೆ ಕೆಎಸ್‌ಆರ್‌ಟಿಸಿ ಈ ದಾಖಲೆ ಮಾಡಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ-ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC), ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು, ಮೆಕ್ಯಾನಿಕ್‌ಗಳು ಮತ್ತು ನಾಲ್ಕು ಬಸ್ ನಿಗಮಗಳ ಎಲ್ಲಾ ಸಿಬ್ಬಂದಿ ಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ್ದಾರೆ.
ಕೆಎಸ್ ಆರ್ ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ನ ಪ್ರತಿನಿಧಿಗಳು ಮಾತನಾಡಿ, ಸಾರಿಗೆ ನಿಗಮದಲ್ಲಿ 14 ಸಾವಿರ ನೌಕರರ ಕೊರತೆ, ಈ ಕೊರತೆಯ ನಡುವಲ್ಲೂ ಯಾವುದೇ ಸಿದ್ಧತೆ ಇಲ್ಲದೆ ಶಕ್ತಿ ಯೋಜನೆ ಆರಂಭಿಸಲಾಯಿತು. ನೌಕರರು ಕೂಡ ಇಷ್ಟು ದೊಡ್ಡ ಸಂಖ್ಯೆಯ ಪ್ರಯಾಣಿಕರನ್ನು ನಿಭಾಯಿಸಬೇಕು ಎಂಬುದನ್ನು ಊಹಿಸಿರಲಿಲ್ಲ. ಯೋಜನೆ ಯಶಸ್ವಿಯಾಗಲು ಅನೇಕ ತೊಂದರೆಗಳನ್ನು ಎದುರಿಸಿದರು ಎಂದು ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಮಾತನಾಡಿ, ನೌಕರರ ಬೆಂಬಲವಿಲ್ಲದಿದ್ದರೆ ಈ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇವರು ಅಸಾಧಾರಣ ಹೀರೋಗಳು ಎಂದು ಶ್ಲಾಘಿಸಿದ್ದಾರೆ.