ಹರಿದ್ವಾರ:
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಲೋಕಸಭಾ ಸದಸ್ಯ ರಾಹುಲ್ ಗಾಂಧಿಯ ಸಮಸ್ಯೆಗಳು ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕ ಒಂದಿಲ್ಲೊಂದು ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
ಈ ಬಾರಿ ಹರಿದ್ವಾರದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತ್ ಜೋಡೋ ಯಾತ್ರೆಯ ವೇಳೆ ಆರ್‌ಎಸ್‌ಎಸ್ ಸಂಘಟನೆಯು 21ನೇ ಶತಮಾನದ ಕೌರವ ಎಂದು ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಆರ್‌ಎಸ್‌ಎಸ್ ನ ಕಾರ್ಯಕರ್ತರೊಬ್ಬರು ಹರಿದ್ವಾರದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ವಾಸ್ತವವಾಗಿ, ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆ ಹರಿಯಾಣವನ್ನು ತಲುಪಿದಾಗ, ರಾಹುಲ್ ಗಾಂಧಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(ಆರ್‌ಎಸ್‌ಎಸ್) ’21ನೇ ಶತಮಾನದ ಕೌರವರು’ ಎಂದು ಬಣ್ಣಿಸಿದರು. ಇಂದಿನ ಕೌರವರು ಖಾಕಿ ಹಾಫ್ ಪ್ಯಾಂಟ್ ಧರಿಸುತ್ತಾರೆ. ಕೈಯಲ್ಲಿ ಕೋಲು ಹಿಡಿದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಆರೆಸ್ಸೆಸ್ ಕಾರ್ಯಕರ್ತ ಕಮಲ್ ಭಡೋರಿಯಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿದ್ವಾರ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಏಪ್ರಿಲ್ 12ರಂದು ವಿಚಾರಣೆ ನಡೆಯಲಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 ಮತ್ತು 500 ಅಡಿಯಲ್ಲಿ ನಾವು ದೂರು ದಾಖಲಿಸಿದ್ದೇವೆ ಎಂದು ವಕೀಲ ಅರುಣ್ ಭದೌರಿಯಾ ಹೇಳಿದ್ದಾರೆ. ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ಎರಡು ನಿಬಂಧನೆಗಳು, ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ