ತುಮಕೂರು
ಹೆಣ್ಣುಮಕ್ಕಳಿಗೆ ಅಪ್ಪನೇ ಸೂಪರ್ ಹೀರೋ ಎಂಬ ಮಾತುಗಳು ನಾವು ಹಾಗಾಗ ಕೇಳುತ್ತಿರುತ್ತೇವೆ. ಅದರಂತೆ ಹೆಣ್ಣುಮಕ್ಕಳು ಅಪ್ಪನ ಮೇಲೆ ವಿಶೇಷ ಪ್ರೀತಿಯನ್ನು ಇಟ್ಟಿರುತ್ತಾರೆ. ಆದರೆ ಇಲ್ಲಿ ನಡೆದ ಘಟನೆಯೊಂದು ಅಪ್ಪ ಎಂಬ ಪದಕ್ಕೆ ಮಸಿ ಬಳಿದಂತಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ 14 ವರ್ಷದ ಮಗಳು ಗರ್ಭ ಧರಿಸಿದ್ದಾಳೆ.
ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಬಂದಿದ್ದ ಕುಟುಂಬ ಹೊನ್ನವಳ್ಳಿಯಲ್ಲಿ ನೆಲೆಸಿದೆ. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ತನ್ನ ಮಗಳ ಮೇಲೆಯೇ ತಂದೆ ಕ್ರೌರ್ಯ ಮೆರೆದಿರುವುದು ತಿಳಿಯುತ್ತಿದ್ದಂತೆ ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಅಡಿ ಕೇಸ್ ದಾಖಲಾಗಿದೆ. ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ.