ಲಕ್ನೋ
ರಾಮಮಂದಿರ ನಿರ್ಮಾಣದ ಫಲವಾಗಿಯೋ ಅಯೋಧ್ಯೆಯಲ್ಲಿ ಭೂಮಿಗೆ ಬಹಳ ಬೇಡಿಕೆ ಬಂದಿದೆ. ಅಂತೆಯೇ, ಸರ್ಕಾರ ಅಯೋಧ್ಯೆಯಲ್ಲಿ ಸರ್ಕಾರಿ ಮಾರ್ಗಸೂಚಿ ದರಗಳನ್ನು ಹೆಚ್ಚಿಸಲು ಯೋಜಿಸಿದೆ. ವರದಿ ಪ್ರಕಾರ ಜಿಲ್ಲಾ ದಂಡಾಧಿಕಾರಿಗಳು (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ಹೊಸ ಸರ್ಕಲ್ ರೇಟ್ ಅಥವಾ ಮಾರುಕಟ್ಟೆ ಮಾರ್ಗಸೂಚಿ ದರಗಳ ಪಟ್ಟಿ ಮಾಡಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ.
2017ರ ಆಗಸ್ಟ್ನಿಂದ ಜಾರಿಯಲ್ಲಿರುವ ಮಾರ್ಗಸೂಚಿ ದರಗಳಿಗಿಂತ ಈಗ ಪ್ರಸ್ತಾವಿತ ದರಗಳು ಶೇ. 50ರಿಂದ ಶೇ. 200ರಷ್ಟು ಹೆಚ್ಚಿವೆ. ಸೆಪ್ಟಂಬರ್ 4ರವರೆಗೂ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ತಿಳಿಸಲು ಅವಕಾಶ ಇದೆ. ಅದಾದ ಬಳಿಕ ದರಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗುತ್ತದೆ.
2019ರಲ್ಲಿ ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ಕೊಟ್ಟ ಬಳಿಕ ಅಯೋಧ್ಯೆಯಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದೆ. ಆದರೂ ಕೂಡ ಇಲ್ಲಿ ಸರ್ಕಲ್ ರೇಟ್ಗಳನ್ನು ಪರಿಷ್ಕರಿಸಲಾಗಿಲ್ಲ. ಈಗ ಮಂದಿರ ನಿರ್ಮಾಣವಾದ ಬಳಿಕ ಭೂಮಿಗೆ ಬೇಡಿಕೆ ಹೆಚ್ಚುತ್ತಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಆಗದೇ ಇರುವ ಕಾರಣ ಸರ್ಕಾರ ಬಹಳಷ್ಟು ಆದಾಯದಿಂದ ವಂಚಿತವಾಗಿದೆ.
ಜಿಲ್ಲೆಯ ಯಾವ್ಯಾವ ಭಾಗದಲ್ಲಿ ಜಮೀನಿನ ಮೌಲ್ಯ ಎಷ್ಟಿದೆ, ಮಾರುಕಟ್ಟೆ ಬೆಲೆ ಎಷ್ಟಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿ ಮಾರ್ಗಸೂಚಿ ದರ ಸಿದ್ಧಪಡಿಸುತ್ತದೆ. ಈ ದರದ ಮೇಲೆ ಜಮೀನು ವಹಿವಾಟಿನಲ್ಲಿ ಮುದ್ರಾಂಕ ಶುಲ್ಕ ನಿಗದಿಯಾಗುತ್ತದೆ. ಭೂಮಾಲೀಕರಾದ ರೈತರಿಂದ ಸರ್ಕಾರವಾಗಲೀ, ಸರ್ಕಾರಿ ಸಂಸ್ಥೆಯಾಗಲೀ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿದ್ದರೆ ಇದೇ ಮಾರ್ಗಸೂಚಿ ದರ ಪ್ರಕಾರ ಹಣ ನೀಡಬೇಕಾಗುತ್ತದೆ. ಒಂದು ಕಡೆ ಸರ್ಕಾರಕ್ಕೆ ಮುದ್ರಾಂಕ ಶುಲ್ಕಗಳ ಮೂಲಕ ಆದಾಯ ಬರುತ್ತದೆ. ಭೂಮಾಲೀಕರಿಗೆ ಜಮೀನು ಮಾರಾಟದಿಂದ ಹೆಚ್ಚು ಆದಾಯ ಸಿಗುತ್ತದೆ.
ಅಯೋಧ್ಯೆಯ ತಿಹುರಾ ಮಾಂಝಾ ಪ್ರದೇಶದಲ್ಲಿ ಒಂದು ಹೆಕ್ಟೇರ್ ಕೃಷಿ ಜಮೀನಿಗೆ 2017ರಿಂದ 11 ಲಕ್ಷ ರೂ ಸರ್ಕಲ್ ರೇಟ್ ಇದೆ. ಈಗ ಇದನ್ನು 23 ಲಕ್ಷಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಅಯೋಧ್ಯೆಯ ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ಸರ್ಕಲ್ ರೇಟ್ ಪರಿಷ್ಕರಿಸಲಾಗುತ್ತಿದೆ. ಕನಿಷ್ಠವೆಂದರೂ ಶೇ. 50ರಷ್ಟು ದರ ಹೆಚ್ಚಳ ಆಗಲಿದೆ.