ಬೆಂಗಳೂರು:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 3ನೇ ಬಾರಿಗೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆ ಮೂಲಕ ಕೆಐಎಬಿಗೆ ಮತ್ತೊಂದು ಮನ್ನಣೆಯ ಗರಿ ಲಭಿಸಿದೆ. ಪ್ರಯಾಣಿಕರ ಸರ್ವೆ ಮೂಲಕ ಮಾಹಿತಿ ಪಡೆದು ACI ASQ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಗಿದೆ. ಈ ಬಾರಿಯೂ ಕೆಐಎಬಿಗೆ ಪ್ರಶಸ್ತಿ ಬಂದಿದ್ದಕ್ಕೆ ಆಡಳಿತ ಮಂಡಳಿ ಸಂತಸಗೊಂಡಿದೆ.
ಸತತ 3 ವರ್ಷಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿ ಸಿಕ್ಕಿದೆ. ಏರ್ಪೋರ್ಟ್ನಲ್ಲಿನ ಅತ್ಯುತ್ತಮ, ವೇಗದ ಸೇವೆಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ. ಇಮಿಗ್ರೇಷನ್, ಕಸ್ಟಮ್ಸ್, ಹೈಸ್ಪೀಡ್ ವೈಫೈ, ವೇಗದ ಬ್ಯಾಗೇಜ್, ಲಾಂಜ್, ಸುಗಮ ಮತ್ತು ತೊಂದರೆ ಮುಕ್ತ ಆಗಮನ ದ್ವಾರ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ.
ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. “ಬೆಂಗಳೂರು ವಿಮಾನ ನಿಲ್ದಾಣವನ್ನು ಎಸಿಐ ವರ್ಲ್ಡ್ ಜಾಗತಿಕವಾಗಿ ಆಗಮನಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಿದೆ. ಆತ್ಮೀಯ ಸ್ವಾಗತ, ಸುಗಮ ಪ್ರಯಾಣಿಕರ ಅನುಭವಗಳು ಮತ್ತು ನಮ್ಮ ಸಿಬ್ಬಂದಿಯ ಸಹಾಯದಿಂದ, ಪ್ರತಿ ಬಾರಿಯೂ ಮನೆಗೆ ಬಂದಂತೆ ಭಾಸವಾಗುವಂತೆ ಮಾಡಲು ನಾವು ಶ್ರಮಿಸಿದ್ದೇವೆ. ನಮ್ಮ ತಂಡ, ಪಾಲುದಾರರು, ಸಿಬ್ಬಂದಿಗಳು ಮತ್ತು ಪ್ರಯಾಣಿಕರಿಲ್ಲದೆ ಈ ಪ್ರಶಸ್ತಿ ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಪ್ರಯಾಣದಲ್ಲಿ ನಮ್ಮನ್ನು ನಂಬಿದ್ದಕ್ಕಾಗಿ ಧನ್ಯವಾದಗಳು” ಎಂದು ಕೆಐಎ ತಿಳಿಸಿದೆ.
