‘ಟಾಕ್ಸಿಕ್​’ಗೆ ಭಯಬಿದ್ದು ಹಿಂದೆ ಸರಿದ ಬನ್ಸಾಲಿ

ಬೆಂಗಳೂರು :

    ಬೇರೆ ಭಾಷೆಯ ದೊಡ್ಡ ಚಿತ್ರಗಳು ಬರುತ್ತವೆ ಎಂದರೆ ಆ ಸಂದರ್ಭದಲ್ಲಿ ನಮ್ಮ ಸಿನಿಮಾಗಳನ್ನು ರಿಲೀಸ್ ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲ ಮೂಡಿಸುವ ವಾತಾವರಣ ಸ್ಯಾಂಡಲ್​​ವುಡ್​ನಲ್ಲಿ ಇತ್ತು. ಆದರೆ, ಈಗ ಕಾಲ ಬದಲಾಗಿದೆ. ಕನ್ನಡದ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಬಾಲಿವುಡ್​ನವರೂ ತಮ್ಮ ಚಿತ್ರವನ್ನು ರಿಲೀಸ್ ಮುಂದೂಡಿಕೊಳ್ಳುತ್ತಾರೆ. ಹಾಗಂತ ಇದು ಕಾಕಕ್ಕ-ಗುಬ್ಬಕ್ಕನ ಕಥೆ ಅಲ್ಲ. ಈ ರೀತಿ ನಿಜವಾಗಲೂ ನಡೆದಿದೆ.

    ಸಂಜಯ್ ಲೀಲಾ ಬನ್ಸಾಲಿ ಅವರು ‘ಲವ್ ಆ್ಯಂಡ್ ವಾರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ರಣಬೀರ್ ಕಪೂರ್, ವಿಕ್ಕಿ ಕೌಶಲ್ ಹಾಗೂ ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ. 2026ರ ಈದ್​ಗೆ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಇತ್ತು. ಈ ಸಂದರ್ಭದಲ್ಲಿ ಬಿಡುಗಡೆ ಹೊಂದಿದರೆ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಜೊತೆ ಕ್ಲ್ಯಾಶ್ ಆಗಲಿದೆ. ಹೀಗಾಗಿ, ಬನ್ಸಾಲಿ ಈ ಬಗ್ಗೆ ಯೋಚಿಸುತ್ತಿದ್ದಾರೆ.

   ‘ ಲವ್ ಆ್ಯಂಡ್ ವಾರ್’ ಚಿತ್ರದ ಶೂಟ್ ಆರಂಭ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರವನ್ನು ಮಾರ್ಚ್​​ಗೆ ತರಬಹುದು. ಆದಾಗ್ಯೂ ಬನ್ಸಾಲಿ ಅವರು ಈ ವಿಚಾರದಲ್ಲಿ ಮನಸ್ಸು ಮಾಡುತ್ತಿಲ್ಲ. ಹೀಗಾಗಿ, 2026ರ ಆಗಸ್ಟ್ ವೇಳೆಗೆ ಸಿನಿಮಾನ ತೆರೆಗೆ ತರುವ ಆಲೋಚನೆ ಅವರಿಗೆ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ. ‘ಟಾಕ್ಸಿಕ್’ ಕಾರಣದಿಂದಲೇ ಅವರು ಸಿನಿಮಾನ ಮುಂದೂಡಿಕೊಂಡರು ಎಂದು ಎಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಬನ್ಸಾಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಂಡರು ಎಂದು ಅನೇಕರು ಹೇಳಿದ್ದಾರೆ. 

   ‘ಕೆಜಿಎಫ್’ ಚಿತ್ರದ ಜೊತೆ ಶಾರುಖ್ ಖಾನ್ ನಟನೆಯ ‘ಜೀರೋ’ ರಿಲೀಸ್ ಆಯಿತು. ಶಾರುಖ್ ಚಿತ್ರ ಮಕಾಡೆ ಮಲಗಿತು. ‘ಕೆಜಿಎಫ್ 2’ ಚಿತ್ರದ ರಿಲೀಸ್ ಸಂದರ್ಭದಲ್ಲಿ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ರಿಲೀಸ್ ಆಗಬೇಕಿತ್ತು. ಆದರೆ, ಯಶ್ ಸಿನಿಮಾದ ಅಬ್ಬರವನ್ನು ಮೊದಲೇ ಊಹಿಸಿದ ತಂಡ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿತು. ಈಗ ‘ಟಾಕ್ಸಿಕ್’ಗಾಗಿ ಬನ್ಸಾಲಿ ತಮ್ಮ ಚಿತ್ರದ ರಿಲೀಸ್​ನ ಮುಂದಕ್ಕೆ ಹಾಕಿದ್ದಾರೆ.