ಕಲಬುರಗಿ
ಕನ್ನಡದ ನಾಡು, ನುಡಿ ರಕ್ಷಣೆಗೆ ಸರಕಾರ ಬದ್ಧ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕಲಬುರಗಿಯ ವಿಶ್ವವಿದ್ಯಾಲಯದ ವಿಜಯ ಪ್ರಧಾನ ವೇದಿಕೆಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾತನಾಡಿದ ಅವರು, ನಾಡಿನ ಸಮೃದ್ಧಿ, ನೆಲ ಜಲ ಅಸ್ಮಿತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಖಾಸಗಿ ಶಾಲೆಗಳಲ್ಲಿ ಕನ್ನಡ ಉಳಿಸಲು, ಬೆಳೆಸಲು ಸರಕಾರ ಬದ್ಧವಾಗಿದೆ ಎಂದರು.
ಕಲಬುರಗಿ ಸೂಫಿ ಸಂತ, ಶರಣರ ನಾಡಾಗಿದ್ದು, ಭಾವೈಕ್ಯತೆಯ ಪ್ರತೀಕವಾಗಿದೆ. ಜಿಲ್ಲೆ ತನ್ನದೇ ಆದ ಸಾಂಸ್ಕೃತಿಕ, ಸಮಾಜಿಕವಾಗಿ ವೈಶಿಷ್ಟತೆಯಿಂದ ಕೂಡಿದೆ ಎಂದ ಅವರು, ಮಾಳಖೇಡದ ರಾಷ್ಟ್ರಕೂಟರು ಆಳಿದ ನಾಡು ಇದಾಗಿದ್ದು, ಮರಾಠಿ, ಉರ್ದು ಭಾಷೆ ಕಲ್ಯಾಣ ಕರ್ನಾಟಕದಲ್ಲಿ ದಟ್ಟವಾಗಿದೆ. ನೃಪತುಂಗನ ಮೊದಲ ಕೃತಿ ಕವಿರಾಜ ಮಾರ್ಗದ ರಚನೆಯಾಗಿದ್ದು ಈ ಭಾಗದ ಮಣ್ಣಿನಲ್ಲಿ. ಅಲ್ಲದೇ ವಿಜ್ಞಾನೇಶ್ವರನ ಮೂಲಾಕ್ಷರ ರಚನೆಯಾಗಿದ್ದು ಇಲ್ಲಿಯೇ.
ಅಂತಹ ಕನ್ನಡ ಸಾಹಿತ್ಯ ನೀಡಿದ್ದು, ಈ ಭಾಗ ಎಂದು ಅವರು ಹಾಡಿಹೊಗಳಿದರು.ಕಲ್ಯಾಣ ಕರ್ನಾಟಕದಲ್ಲಿ ಸಮಾಜದ ಪರಿಕಲ್ಪನೆಯನ್ನು ಸಾಹಿತ್ಯದ ಮೂಲಕ ಮೂಲಕ ಸಾರಲಾಯಿತು. ನಾಲ್ಕನೇ ಬಾರಿ ಈ ಭಾಗದಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ದೊರಕಿದೆ. ಕಲಬುರಗಿ ಜಿಲ್ಲೆಯು ಒಣ ಪ್ರದೇಶ, ಬರಗಾಲದಿಂದ ಕೂಡಿದ್ದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು. ಹೀಗಾಗಿ ವಿಶೇಷವಾಗಿ ನಂಜುಂಡಪ್ಪ ವರದಿ ಅನುಸಾರ ಅಭಿವೃದ್ಧಿಗೆ ಒತ್ತು ನೀಡಲಾಯಿತು ಎಂದರು.
ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದ್ದು, 371 (ಜೆ) ಪರಿಚ್ಛೇದ ಜಾರಿಯಿಂದ ಈ ಭಾಗದ ಜನರಿಗೆ ಸ್ಥಳೀಯ ವೃಂದ ಸೇರಿ ವೈದ್ಯಕೀಯ, ಇಂಜಿನೀಯರ್ ನಲ್ಲಿ 700ಕ್ಕೂ ಹೆಚ್ಚು ಸೀಟುಗಳು ಲಭಿಸುತ್ತಿವೆ ಎಂದರು.
ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಗಿದ್ದು, ಫೆ.7ರಿಂದ ಬೀದರ್ ಮಾರ್ಗವು ಕಾರ್ಯನಿರ್ವಹಿಸಲಿದೆ ಎಂದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ನಾಡಿನ ಭಾಷೆಯಾದ ಕನ್ನಡ ಇಂದು ನಶಿಸುತ್ತಿದೆ. ಆದ್ದರಿಂದ ಯಾರಾದರೂ ಅನ್ಯ ಅಥವಾ ಪರಕೀಯ ಭಾಷೆಯಲ್ಲಿ ಮಾತನಾಡಿಸಿದರೆ, ತಾವು ಕನ್ನಡದಲ್ಲಿ ಮಾತನಾಡಿ ಎಂದು ಕರೆ ನೀಡಿದರು.ಪ್ರಸ್ತುತ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಹೀಗಾಗಿ ಕನ್ನಡವನ್ನು ಕಡ್ಡಾಯವಾಗಿ ಎಲ್ಲರೂ ಮಾತನಾಡುವ ಅವಶ್ಯಕತೆ ಇದೆ ಎಂದ ಅವರು, ಶರಣರು ಇಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿದರು. ಬಸವಣ್ಣನವರು ಅನುಭವ ಮಂಟಪದ ಮೂಲಕ ಶರಣ, ಶರಣೆಯರಿಗೆ ವಚನಗಳನ್ನು ತಿಳಿಸಿಕೊಟ್ಟರು. ಸಾಹಿತ್ಯದ ಮೂಲಕ ಅವರು ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚು ಜನರು ಇಲ್ಲಿ ಪಾಲ್ಗೊಂಡಿದ್ದು, ಅಲ್ಲಿಕ್ಕಿಂತ ಇಲ್ಲಿ ಶೇ.70ರಷ್ಟು ಜನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಸಮ್ಮೇಳನವನ್ನು ಬಿ.ಎಸ್. ಯಡಿಯೂರಪ್ಪ ಅವರು ಅದ್ಧೂರಿಯಾಗಿ ಮಾಡಬೇಕು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಅವರು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಮಾತನಾಡಿ, ಕಲಬುರ್ಗಿಯ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸಮ್ಮೇಳನ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಇಂಗ್ಲೀಷ ಭಾಷೆಯ ವ್ಯಾಮೋಹದಿಂದ ಇಂದು ಕನ್ನಡ ಭಾಷೆ ಆತಂಕದಲ್ಲಿದೆ. ಆದ್ದರಿಂದ ಈ ಆತಂಕವನ್ನು ದೂರ ಮಾಡಲು ಕನ್ನಡದ ಉತ್ಖನನಕ್ಕೆ ಎಲ್ಲರೂ ಪಣ ತೊಡಬೇಕಾಗಿದೆ ಎಂದು ಕರೆ ನೀಡಿದರು.
ಸೂಫಿ ಸಂತರು, ಶರಣರು, ದಾಸರು ಈ ಭಾಗದವರೆ ಆಗಿರುವುದರಿಂದ ಇಂತಹ ಅಮೂಲ್ಯವಾದ ಸಾಹಿತ್ಯವನ್ನು ರಚಿಸಿದ್ದಾರೆ. ಇಡಿ ವಿಶ್ವದ ಬೇರೆ ಭಾಷೆಗಳಲ್ಲಿ ಇಂತಹ ಸಾಹಿತ್ಯನಿರ್ಮಾಣವಾಗಿಲ್ಲ. ದಲಿತ, ಹಿಂದುಳೀದವರು ವಚನಗಳನ್ನು ಬರೆದಿದ್ದಾರೆ ಎಂದ ಅವರು ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಲು ಕಾರಣವಾಗಿದೆ ಎಂದರು.
ಮನುಷ್ಯತ್ವ, ಸಮಾನತೆ, ಸೌಹಾರ್ದತೆ ಮುಖ್ಯ ಎಂಬುದನ್ನು ಕನ್ನಡ ಸಾಹಿತ್ಯ ಕಲಿಸಿಕೊಟ್ಟಿದೆ. ಸಾಹಿತ್ಯದಲ್ಲಿ ತತ್ವ ಸಿದ್ಧಾಂತ ಬೇರೆ ಇರಬಹುದು ಆದರೆ, ಪರಸ್ಪರ ಗೌರವವಿರಬೇಕು ಎಂದರು.ಸಮ್ಮೇಳನದಲ್ಲಿ ಜ್ಞಾನಪೀಠ ಪುರಸ್ಕೃತ ಡಾ ಚಂದ್ರಶೇಖರ್ ಕಂಬಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸುವರ್ಣ ಹಣಮಂತ ಮಾಲಾಜೀ, ಶಾಸಕರಾದ ಅಜಯ್ ಸಿಂಗ್, ದತ್ತಾತ್ರೇಯ ಪಾಟೀಲ್, ರಾಜ್ ಕುಮಾರ್ ಪಾಟೀಲ್ ತೆಲ್ಕೂರ್, ಅವಿನಾಶ್ ಜಾಧವ್ ಮತ್ತಿತರರು ಉಪಸ್ಥಿತರಿದ್ದರು