12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ನಟ ‘ಪುನೀತ್​ ರಾಜ್​ಕುಮಾರ್’ ಹೆಸರಿಡಲು ಅಧಿಕೃತ ಅನುಮೋದನೆ ನೀಡಿದ ಬಿಬಿಎಂಪಿ!

ಬೆಂಗಳೂರು:

ಸ್ಯಾಂಡಲ್​ವುಡ್​ ನಟ ಪವರ್ ಸ್ಟಾರ್ `ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿತ್ತು. ಅವರ ನೆನೆಪು ಎಂದಿಗೂ ಮಾಸುವುದಿಲ್ಲ. ಅವರ ನೆನೆಪು ಸದಾಕಾಲ ಉಳಿಯಲು ಇದೀಗ 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ‘ಪುನೀತ್​ ರಾಜ್​ಕುಮಾರ್ ರಸ್ತೆ’ಎಂದು ನಾಮಕರಣ ಮಾಡಲು ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದೆ.

ʻಪುನೀತ್ ರಾಜ್​ಕುಮಾರ್ ರಸ್ತೆʼ ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದ್ದು, ಈ ಸಂಬಂಧ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನಿರ್ಣಯ ಕೈಗೊಂಡು ಅನುಮೋದನೆ ನೀಡಿದ್ದಾರೆ.

ಮೈಸೂರು ರಸ್ತೆಯ ನಾಯಂಡನ ಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ಪುನೀತ್​ ಹೆಸರನ್ನು ಇಡಲಾಗುತ್ತದೆ.

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್​ರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಪುನೀತ್ ರಾಜ್​ಕುಮಾರ್ ರಸ್ತೆ ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ – ಕದಿರೇನ ಹಳ್ಳಿ ಪಾರ್ಕ್ – ಸಾರಕ್ಕಿ ಸಿಗ್ನಲ್ – ಜೆ.ಪಿ.ನಗರವನ್ನು ಸಂಪರ್ಕಿಸಲಿದೆ.

ಪುನೀತ್ ರಾಜ್​ಕುಮಾರ್ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಸಂಬಂಧ ಬಿಬಿಎಂಪಿ ಡಿಸೆಂಬರ್ ಅಂತ್ಯದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಆಕ್ಷೇಪಣೆಗಳಿದ್ದಲ್ಲಿ 30 ದಿನಗಳ ಒಳಗೆ ಸಲ್ಲಿಸುವಂತೆ ತಿಳಿಸಲಾಗಿತ್ತು. ರಸ್ತೆಗೆ ‘ಶ್ರೀ.ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಬಹುದಾಗಿತ್ತೆಂದು ರಸ್ತೆಯ ಸಮೀಪದ ಬಡಾವಣೆಗಳಿಗೆ ಸೇರಿರುವ 8 ಸಂಘಸಂಸ್ಥೆಗಳ 700ಕ್ಕೂ ಹೆಚ್ಚು ಜನ ಸಹಿ ಮಾಡಿದ್ದರು.

ಬೆಂಗಳೂರು ಮಹಾನಗರ ಜಿಲ್ಲಾ ಡಾ.ಅಂಬರೀಶ್ ಅಭಿಮಾನಿಗಳ ಸಂಘ ಹಾಗೂ ದೇವರಮಗ ಅಭಿಷೇಕ್ ಅಂಬರೀಶ್ ಟ್ರಸ್ಟ್​​​ ಮನವಿ ಪತ್ರ ಸಲ್ಲಿಸಿ ರಸ್ತೆಗೆ ‘ಡಾ.ಅಂಬರೀಶ್ ರಸ್ತೆ’ ಎಂದು ನಾಮಕರಣ ಮಾಡಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಭೆಯ ಅಧಿಕಾರದಿಂದ ರಸ್ತೆಗೆ ‘ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ.

ಆದಷ್ಟು ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ಪುನೀತ್ ರಾಜ್‍ಕುಮಾರ್ ರಸ್ತೆಯ ನಾಮಕರಣ ಸಮಾರಂಭವನ್ನು ರಾಜ್ ಕುಟುಂಬದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಏರ್ಪಡಿಸಲಾಗುವುದು ಎಂದು ಎನ್.ಆರ್ ರಮೇಶ್ ಮಾಹಿತಿ ನೀಡಿದ್ದಾರೆ.‌

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link