ತುಮಕೂರು: ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಅಂತೆಯೇ ಗೃಹ ಬಳಕೆ ಗ್ಯಾಸ್ ಪೈಪ್‍ಲೈನ್ ಅಳವಡಿಕೆ ಕಾರ್ಯವೂ ಜೊತೆ ಜೊತೆಯಾಗಿಯೇ ಸಾಗಿದೆ. ಇದರ ಜೊತೆಗೆ ಇನ್ನೂ ಕೆಲವೊಂದು ಕಾಮಗಾರಿಗಳು ನಡೆಯುತ್ತಿವೆ. ಆದರೆ ನಗರ ಪಾಲಿಕೆಯ ಕಾಮಗಾರಿ ಯಾವುದು? ಸ್ಮಾರ್ಟ್‍ಸಿಟಿ ಕಾಮಗಾರಿ ಯಾವುದು ಎಂಬ ಗೊಂದಲಗಳು ಮುಂದುವರಿದಿವೆ.
ನಗರದಲ್ಲಿ ನಡೆಯುತ್ತಿರುವ ಗ್ಯಾಸ್ ಪೈಪ್‍ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ 2016 ರಲ್ಲಿಯೆ ತುಮಕೂರು ಮಹಾನಗರ ಪಾಲಿಕೆಗೆ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ಪತ್ರ ನೀಡಿದೆ. ಈ ಷರತ್ತುಗಳು ಪಾಲನೆಯಾಗುತ್ತಿವೆಯೇ? ಇಲಾಖೆಗಳ ನಡುವೆ ಪರಸ್ಪರ ಸಮನ್ವಯತೆ ಇದೆಯೆ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ದಿನಾಂಕ: 05.08.2016 ರಂದು ಮಹಾನಗರ ಪಾಲಿಕೆಯು ಮೇಘ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅವರಿಗೆ ನೀಡಿರುವ ಷರತ್ತು ಬದ್ಧ ಅನುಮತಿ ಪತ್ರದಲ್ಲಿ ಉಲ್ಲೇಖಿತವಾಗಿರುವ ಅಂಶಗಳು ಈ ಕೆಳಕಂಡಂತಿವೆ.ರಸ್ತೆಯಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಸೂಚನಾ ಫಲಕಗಳನ್ನು ಮತ್ತು ಎಚ್ಚರಿಕೆ ಕೆಂಪು ದೀಪಗಳನ್ನು ಅಳವಡಿಸಿ ಕೆಲಸ ನಿರ್ವಹಿಸಬೇಕು. ರಸ್ತೆ ಕತ್ತರಿಸಿದ ಮಣ್ಣನ್ನು ಡಾಂಬರ್ ರಸ್ತೆಯಲ್ಲಿ ಹಾಕದೆ ರಸ್ತೆ ಬದಿಯಲ್ಲಿ ಹಾಕಬೇಕು. ರಸ್ತೆಯಲ್ಲಿ ಗೃಹ ಬಳಕೆಯ ಗ್ಯಾಸ್ ಪೈಪ್‍ಲೈನ್ ಅಳವಡಿಸಿದ ನಂತರ ಟ್ರೆಂಚ್‍ಗಳಿಗೆ ಮಣ್ಣನ್ನು ಸಮರ್ಪಕವಾಗಿ ಪದರಗಳಲ್ಲಿ ತುಂಬಬೇಕು.
ಪ್ರಮುಖ ಸ್ಥಳಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಮೇಲ್ಪದರಗಳನ್ನು ಕತ್ತರಿಸದೆ, ವಿರೂಪಗೊಳಿಸದಂತೆ ಕಡ್ಡಾಯವಾಗಿ ರಸ್ತೆ ತಳದಲ್ಲಿ ರಂಧ್ರಗಳನ್ನು ಕೊರೆದು ಗ್ಯಾಸ್ ಪೈಪ್‍ಲೈನ್ ಅಳವಡಿಸಬೇಕು. ರಸ್ತೆಯಲ್ಲಿ ಈಗಾಗಲೇ ಇರುವ ಮಹಾನಗರ ಪಾಲಿಕೆಯ ಕುಡಿಯುವ ನೀರಿನ ಪೈಪ್‍ಲೈನ್‍ಗಳಿಗೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ಎಚ್ಚರಿಕೆ ವಹಿಸಬೇಕು. ಹಾಗೇನಾದರೂ ಆದಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಕೂಡಲೆ ದುರಸ್ತಿಗೊಳಿಸಿ ಮುಂದಿನ ಕೆಲಸ ನಿರ್ವಹಿಸಬೇಕು.
ರಸ್ತೆಯಲ್ಲಿ ಕೆಲಸ ನಿರ್ವಹಿಸುವ ವೇಳೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಎಚ್ಚರಿಕೆ ವಹಿಸುವುದು. ಕಾಮಗಾರಿ ಆರಂಭಿಸುವ ಮುನ್ನ ಮಹಾನಗರ ಪಾಲಿಕೆಯ ತಾಂತ್ರಿಕ ಸಿಬ್ಬಂದಿಯನ್ನು ಸಂಪರ್ಕಿಸಿ ಸದರಿ ರಸ್ತೆಗಳಲ್ಲಿ ಬರಬಹುದಾದ ನೀರು ಸರಬರಾಜು ಮತ್ತು ಒಳ ಚರಂಡಿ ವ್ಯವಸ್ಥೆ ಕೊಳವೆ ಮಾರ್ಗಗಳ ಮಾಹಿತಿ ಪಡೆದು ಸದರಿ ಕೊಳವೆ ಮಾರ್ಗಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
ಸಾರ್ವಜನಿಕ ಸುರಕ್ಷತೆಗೆ ತೊಂದರೆಯಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು. ಅಜಾಗರೂಕತೆಯಿಂದ ಅಥವಾ ತಾಂತ್ರಿಕ ತೊಂದರೆಯಿಂದ ಅಪಘಾತಗಳಾದಲ್ಲಿ ಸಂಸ್ಥೆಯನ್ನೆ ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು. ರಸ್ತೆ ಕತ್ತರಿಸಲು ಆದೇಶ ನೀಡಿರುವ ಪಟ್ಟಿಯಂತೆಯೆ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಉದ್ದವನ್ನು ಮಾಡತಕ್ಕದ್ದಲ್ಲ.
ಮೇಲ್ಕಂಡ ಷರತ್ತುಗಳನ್ನು ಸಮರ್ಪಕವಾಗಿ ಪಾಲಿಸದೆ ಹೋದಲ್ಲಿ ಮಹಾನಗರ ಪಾಲಿಕೆ ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬಹುದಾಗಿರುತ್ತದೆ ಎಂದು ಷರತ್ತುಗಳಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಕಾಮಗಾರಿ ಮುಕ್ತಾಯದ ನಂತರ ಕಾರ್ಯಾಲಯದಿಂದ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳುವಂತೆಯೂ ತಿಳಿಸಲಾಗಿದೆ. ಇಷ್ಟು ಮಾಹಿತಿ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ನಡೆಸುತ್ತಿರುವವರಿಗೆ, ಮಹಾನಗರ ಪಾಲಿಕೆಯ ಸದಸ್ಯರುಗಳಿಗೆ, ಅಧಿಕಾರಿಗಳಿಗೆ ಇದೆಯೆ ಎಂಬ ಪ್ರಶ್ನೆಯೂ ಎದುರಾಗಿದೆ.
ಸ್ಮಾರ್ಟ್‍ಸಿಟಿಯಾಗುತ್ತಿರುವ ನಗರದಲ್ಲಿ ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ರಸ್ತೆ ಅಗೆತ, ಮತ್ತೆ ಪುನರ್ ಅಗೆತ, ಹೀಗೆ ಕಾಮಗಾರಿಯ ಮೇಲೆ ಮತ್ತೊಂದು ಕಾಮಗಾರಿ ನಡೆಯುತ್ತಲೆ ಇದೆ. ಎಲ್ಲ ಸೌಲಭ್ಯಗಳು ಒಂದೇ ಕಡೆ ಬರುವಂತೆ ಮಾಡಲಾಗುತ್ತಿದೆ ಎಂಬ ಹೇಳಿಕೆಗಳು ಈಗ ಅರ್ಥ ಕಳೆದುಕೊಳ್ಳುತ್ತಿವೆ. ಪರಸ್ಪರ ಇಲಾಖೆಗಳು ಮತ್ತು ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆ ಸ್ಮಾರ್ಟ್‍ಸಿಟಿ ಕಾಮಗಾರಿಗಳಲ್ಲಿ ಎದ್ದು ಕಾಣುತ್ತಿದೆ. ಪರಿಣಾಮವಾಗಿ ಮತ್ತೆ ಮತ್ತೆ ರಸ್ತೆ ಅಗೆತ, ಗುಂಡಿ ತೆಗೆದು ಹಾಗೆಯೇ ಬಿಡುವುದು, ನಮ್ಮದಲ್ಲ ಎಂದು ನಿರ್ಲಕ್ಷಿಸುವುದು, ಗುಂಡಿಗಳ ಮೇಲೆ ವಾಹನಗಳು ಹರಿದು ಅಪಘಾತಕ್ಕೀಡಾಗುತ್ತಿರುವುದು ಇವೆಲ್ಲಾ ಸಾಮಾನ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
