ಹುಬ್ಬಳ್ಳಿ:
ಬ್ಲಾಕ್ ಟ್ರೇಡಿಂಗ್ ಹಾಗೂ ಐಪಿಒದಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ, ಹೂಡಿಕೆ ಮಾಡಲು ಪ್ರೇರೇಪಿಸಿ ನಿವೃತ್ತ ದಂಪತಿಗೆ 2.39 ಕೋಟಿ ರೂ. ವಂಚಿಸಲಾಗಿದೆ. ನಗರದ ಕೇಶ್ವಾಪುರದ ನಿವಾಸಿಗಳಾದ ದಂಪತಿ ವಂಚನೆಗೆ ಒಳಗಾಗಿದ್ದು, ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿಗೆ ದಿವ್ಯ ಹಾಗೂ ದೀಪಕ್ ಎಂಬುವರು ಪರಿಚಯ ಮಾಡಿಕೊಂಡು, ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿದ್ದಾರೆ. ಮೊದಲು 15,000 ರೂ. ಹೂಡಿಕೆ ಮಾಡಿದಾಗ, ಉತ್ತಮ ಲಾಭ ನೀಡಿದ್ದಾರೆ. ನಂತರ ವಿವಿಧ ಹಂತದಲ್ಲಿ ಮೇ 1ರಿಂದ ಜೂನ್ 12ರ ವರೆಗಿನ ಅವಧಿಯಲ್ಲಿ ಎರಡು ಡು ಬ್ಯಾಕ್ ಖಾತೆಗಳ ಮೂಲಕ ಒಟ್ಟು 2.39 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ.
ಬಳಿಕ ದಂಪತಿಯ ಪುತ್ರಿ ಖಾತೆಗಳನ್ನು ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಈ ಕುರಿತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.