ಪುರಿ
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಭಾರತದ ವಾತಾವರಣ ಬಿಸಿಯಾಗುತ್ತಿದೆ. ಅನೇಕ ಹಿಂದೂ ಸಂಘಟನೆಗಳು ಇದರ ಬಗ್ಗೆ ಧ್ವನಿಯೆತ್ತಿದ್ದಾರೆ. ಈಗ ಈ ಬಗ್ಗೆ ಪುರಿಯ ಪೀಠಾಧೀಶ್ವರ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಒಂದು ವಿಡಿಯೋ ಮೂಲಕ ಈ ಬಗ್ಗೆ ಮಾತನಾಡಿದ್ದು, ‘ಶಾಂತಿ ಸ್ಥಾಪನೆ ಮಾಡಿದರೆ ನಾವು ಹಿಂದೂಗಳ ಮೇಲೆ ಉಪಕಾರ ಮಾಡಿದ್ದೇವೆಂದು ಮುಸಲ್ಮಾನರು ಭಾವಿಸಬಾರದು. ಮುಸಲ್ಮಾನರು ಅವರ ಅಸ್ತಿತ್ವ ಸುರಕ್ಷಿತ ಇಡುವುದಕ್ಕಾಗಿ ಹಿಂದೂಗಳ ರಕ್ಷಣೆ ಮಾಡಬೇಕು. ಹಿಂದುಗಳನ್ನು ಗುರಿ ಮಾಡಿ ದಾಳಿ ನಡೆಸಿದರೆ ೧೦೦ -೨೦೦ ಹಿಂದುಗಳು ಹತರಾಗುವ ಸಾಧ್ಯತೆ ಇದೆ: ಆದರೆ ಮುಸಲ್ಮಾನರು ಮಾತ್ರ ಉಳಿಯುವುದಿಲ್ಲ’ ಎಂದು ಹೇಳಿದರು.
ಶಂಕರಾಚಾರ್ಯರ ಶಿಷ್ಯ ಮತ್ತು ಶಿವಗಂಗಾ ಆಶ್ರಮ, ಝಾನ್ಸಿಯ ಮಹಂತ ಪ್ರಫುಲ್ಲ ಚೈತನ್ಯ ಬ್ರಹ್ಮಚಾರಿ ಅವರು ಶಂಕರಾಚಾರ್ಯರ ಈ ವಿಡಿಯೋ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಂಕರಾಚಾರ್ಯರು, ಎಲ್ಲಿ ಹಿಂದುಗಳಿಲ್ಲ, ಅಲ್ಲಿ ಮುಸಲ್ಮಾನರು ಪರಸ್ಪರ ಹೊಡೆದಾಡಿ ಸಾಯುತ್ತಿದ್ದಾರೆ. ಸನಾತನ ಹಿಂದುಗಳೇ ಜಗತ್ತಿನಲ್ಲಿ ಶಾಂತಿ ಪ್ರಸ್ತಾಪಿಸಲು ಸಾಧ್ಯ. ಆದ್ದರಿಂದ ಹಿಂದುಗಳ ರಕ್ಷಣೆ ಮಾಡಿ, ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಈ ಹಿಂದೆ ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಜ್ಯೋತಿರ್ಮಠ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹಿಂದುಗಳ ಮೇಲಿನ ದಾಳಿಯನ್ನು ಖಂಡಿಸಿದ್ದರು. ‘ನೆರೆಯ ಬಾಂಗ್ಲಾದೇಶದಲ್ಲಿ ಶೇಕಡಾ ೮ಕ್ಕಿಂತಲೂ ಕಡಿಮೆ ಹಿಂದುಗಳು ವಾಸಿಸುತ್ತಿದ್ದಾರೆ. ಅವರ ಸುರಕ್ಷೆ ಮಹತ್ವದ್ದಾಗಿದೆ. ಅಲ್ಲಿ ಅಧಿಕಾರದಲ್ಲಿರುವವರು ಹಿಂದೂಗಳಿಗೆ ಯಾವುದೇ ಅಡಚಣೆ ಆಗದಿರುವಂತೆ ಜಾಗ್ರತೆ ವಹಿಸಬೇಕು’ ಎಂದು ಕರೆ ನೀಡಿದ್ದರು.