ಬೆಂಗಳೂರು:
ಗೃಹಜ್ಯೋತಿ ಯೋಜನೆ ಫಲಾನುಭವಿಗಳಾಗಲು ಅರ್ಜಿ ನೋಂದಣಿ ಪ್ರಕ್ರಿಯೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಆರಂಭದಲ್ಲಿ ಹಲವು ಸಮಸ್ಯೆಗಳನ್ನು ಅನುಭವಿಸಿದ ಬಳಿಕ, ಈಗ ನೋಂದಣಿ ಪ್ರಕ್ರಿಯೆ ಸುಲಭವಾಗಿದ್ದು, ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಸಮಸ್ಯೆ ಶುರುವಾಗಿದೆ. ಸೈಬರ್ ವಂಚಕರು ಗೃಹಜ್ಯೋತಿ ಯೋಜನೆ ಅರ್ಜಿ ನೋಂದಣಿಯ ನಕಲಿ ಲಿಂಕ್‌ಗಳನ್ನು ಸೃಷ್ಟಿಸಿದ್ದಾರೆ.
ಈ ಲಿಂಕ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದು, ಅಪ್ಪಿ ತಪ್ಪಿ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ವೈಯಕ್ತಿಕ ವಿವರಗಳು, ಬ್ಯಾಂಕ್ ಖಾತೆಗೂ ಕನ್ನ ಹಾಕುವ ಅಪಾಯವಿದೆ. ಗೃಹಜ್ಯೋತಿ ಯೋಜನೆಗೆ ಲಿಂಕ್‌ಗಳು ಹ್ಯಾಕ್ ಆಗಿದೆ ಎಂದು ಸಚಿವರು ಕೂಡ ಇತ್ತೀಚೆಗೆ ಹೇಳಿಕೆ ನೀಡಿದ್ದು, ಇದಕ್ಕೆ ಪುಷ್ಠಿ ನೀಡಿದೆ.
ಗೃಹ ಜ್ಯೋತಿ ಮಾತ್ರವಲ್ಲ, ಗೃಹ ಲಕ್ಷ್ಮಿ, ಯುವ ನಿಧಿ ಯೋಜನೆಗಳಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸದ್ಯ ಉಚಿತ ವಿದ್ಯುತ್ ಪಡೆಯುವ ಗೃಹ ಜ್ಯೋತಿಗಾಗಿ ಮಾತ್ರ ಅರ್ಜಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಪ್ರತಿ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮಿ, ನಿರುದ್ಯೋಗಿ ಪದವಿಧರರಿಗೆ 3000 ಸಾವಿರ ರೂಪಾಯಿ ನೀಡುವ ಯುವ ನಿಧಿ ಯೋಜನೆಗಳಿಗೆ ಇನ್ನೂ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಿಲ್ಲ. ಈ ಬಗ್ಗೆ ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್, ಟೆಲಿಗ್ರಾಂ, ಮೆಸೇಜ್ ಯಾವುದೇ ಮಾಧ್ಯಮಗಳಲ್ಲಿ ಲಿಂಕ್ ಕಂಡರು ಕ್ಲಿಕ್ ಮಾಡಬೇಡಿ.
ಗ್ರಾಹಕರಿಗೆ ಬೆಸ್ಕಾಂ ಮನವಿ ನಕಲಿ ಲಿಂಕ್‌ಗಳು ಹರಿದಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಬಳಿಕ ಬೆಸ್ಕಾಂ ಕೂಡ ಗ್ರಾಹಕರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ. ಅಧಿಕೃತ ವಬ್‌ಸೈಟ್‌ನಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದೆ. ಇನ್ನು ನೋಂದಣಿ ಮಾಡಲು ಗೊತ್ತಿರುವವರು, ಅಕ್ಕ ಪಕ್ಕದವರಿಗೆ, ಗೊತ್ತಿಲ್ಲದವರಿಗೆ ನೋಂದಣಿ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿದೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ ನಕಲಿ ವಿದ್ಯುತ್ ಬಿಲ್: ಗ್ರಾಹಕರಿಗೆ ಬೆಸ್ಕಾಂ ಎಚ್ಚರಿಕೆ https://sevasindhugs.karnataka.gov.in/ ಈ ವೆಬ್‌ಸೈಟ್‌ನಲ್ಲಿ ಮಾತ್ರ ನೀವು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು. ಸಾಕಷ್ಟು ಜನ ಈ ನೋಂದಣಿ ಮಾಡುತ್ತಿರುವ ಕಾರಣ, ಕೆಲವೊಮ್ಮೆ ಸರ್ವರ್ ಬ್ಯುಸಿ ಬರುತ್ತದೆ. ಹಾಗಂತ ನೀವು ಇನ್ಯಾವುದೋ ವೆಬ್‌ಸೈಟ್‌ಗೆ ತೆರಳಿದರೆ ನಿಮ್ಮ ಆಧಾರ್, ಗ್ರಾಹಕರ ಐಡಿ ವಿವರಗಳು ಸೈಬರ್ ಕಳ್ಳರ ಪಾಲಾಗಲಿವೆ.
ಗೃಹಲಕ್ಷ್ಮಿ, ಯುವ ನಿಧಿ ನೋಂದಣಿ ಬಗ್ಗೆ ಇರಲಿ ಜಾಗ್ರತೆ ಗೃಹ ಜ್ಯೋತಿ ಯೋಜನೆಯಲ್ಲಿ ನೀವು ಆಧಾರ್, ಮೊಬೈಲ್ ಸಂಖ್ಯೆ, ಗ್ರಾಹಕರ ಐಡಿ ವಿವರಗಳನ್ನು ಮಾತ್ರ ನೀಡಬೇಕು. ಆದರೆ ಗೃಹ ಲಕ್ಷ್ಮೀ ಯೋಜನೆ ಮತ್ತು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ನಂಬರ್ ಸೇರಿದಂತೆ ಹಲವು ಮಹತ್ವದ ಮಾಹಿತಿ ನೀಡಬೇಕಾಗುತ್ತದೆ. ಗೃಹ ಲಕ್ಷ್ಮಿ ಮತ್ತು ಯುವ ನಿಧಿ ಯೋಜನೆಗೆ ಇನ್ನೂ ಅರ್ಜಿ ಸ್ವೀಕರಿಸುತ್ತಿಲ್ಲ.
ವಾಟ್ಸಾಪ್ ಸೇರಿದಂತೆ ಹಲವು ಕಡೆ ಬರುವ ಸುಳ್ಳು ಮಾಹಿತಿಗೆ ಮರುಳಾಗಿ ನಕಲಿ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ, ವಿವರಗಳನ್ನು ನಮೂದಿಸಿದರೆ ವಂಚಕರು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಅಪಾಯ ಹೆಚ್ಚಾಗಿದೆ. ಅಧಿಕೃತ ಆದೇಶ ಬರುವವರೆಗೂ ಈ ರೀತಿಯ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ, ಸರ್ಕಾರವೇ ನೋಂದಣಿ ಬಗ್ಗೆ ಸೂಚನೆಗಳನ್ನು ನೀಡಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ