ಮಂಡ್ಯ :
ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಮೂವರು ಜೆಡಿಎಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗುರುದೇವನಹಳ್ಳಿಯಲ್ಲಿ ಪ್ರಚಾರಕ್ಕೆ ಬರಬೇಕಾಗಿತ್ತು. ಅವರಿಗಾಗಿ ಜನ ಕಾಯುತ್ತಿದ್ದರು. ಈ ವೇಳೆ ಕಾರ್ತಿಕ್ ಹಾರ್ನ್ ಮಾಡುತ್ತಾ ಬೈಕ್‌ನಲ್ಲಿ ಬಂದಿದ್ದಾರೆ. ನಿಧಾನವಾಗಿ ತೆರಳುವಂತೆ ಸ್ಥಳದಲ್ಲಿದ್ದ ಜನರು ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಘರ್ಷಣೆ ಉಂಟಾಗಿದೆ.
ಈ ವೇಳೆ ಜೆಡಿಎಸ್‍ನ ಕಾರ್ತಿಕ್, ಅನಿಲ್, ಪಾಪಣ್ಣ ಮೇಲೆ ಸುಮಲತಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಷಯ ತಿಳಿದು ಭಾನುವಾರ ರಾತ್ರಿ ಕೆಎಂ ದೊಡ್ಡಿ ಆಸ್ಪತ್ರೆಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಭೇಟಿ ನೀಡಿ, ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ, ಈ ರೀತಿ ಗಲಾಟೆ ಮಾಡಿದ್ರೆ ನಾನು ಸುಮ್ಮನೆ ಕೂರಲ್ಲ ಎಂದು ನಿಖಿಲ್ ಗರಂ ಆಗಿದ್ದಾರೆ ಎನ್ನಲಾಗಿದೆ.
ನಿಮಗೆ ನ್ಯಾಯ ಕೊಡಿಸುವ ಜವಬ್ದಾರಿ ನಮ್ಮದು ಯಾವುದೇ ದುಡುಕು ನಿರ್ಧಾರ ಕೈಗೊಳ್ಳಬೇಡಿ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ ನಾವು ಏನೇ ಮಾಡಿದ್ರೂ ತಪ್ಪಾಗುತ್ತೆ ಎಂದು ಗಾಯಗೊಂಡವರನ್ನು ನಿಖಿಲ್ ಸಮಾಧಾನ ಪಡಿಸಿದ್ದು, ಘಟನೆ ಸಂಬಂಧ ಭಾರತೀನಗರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ